ಕೂಡಿಗೆ, ಏ. 29: ತಾ. 29 ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ನಾಲ್ಕು ತಿಂಗಳುಗಳಿಂದ ಬಾರದ ಮಾಸಾಶನ’ ಎಂಬ ವರದಿಗೆ ತುರ್ತು ಸ್ಪಂದನ ದೊರಕಿದೆ.

ಪತ್ರಿಕೆ ಆಧಾರಿತವಾಗಿ ಜಿಲ್ಲಾಧಿಕಾರಿಗಳ ತುರ್ತು ಆದೇಶದ ಮೇರೆಗೆ ಇಂದು ಎರಡು ಇಲಾಖೆಯ ಅಧಿಕಾರಿಗಳ ತಂಡ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಅಂಗವಿಕಲ ಮತ್ತು ಹಿರಿಯ ನಾಗರಿಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಸಾಶನ ಬಾರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದರು.

ಈ ಕುರಿತು ಪರಿಶೀಲಿಸಿ ಸರಿಪಡಿಸುವ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಂಧತಿ, ವಿಶೇಷಚೇತನ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಸಂಪತ್ ಕುಮಾರ ಮತ್ತು ವಲಯ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ ಸೇರಿದಂತೆ ಮಂಜೇಗೌಡ, ಕಮಲಮ್ಮ ಇದ್ದರು.

ಕೂಡಿಗೆ-ಕೂಡುಮಂಗಳೂರು ಗ್ರಾಮದಲ್ಲಿ 49 ಸೇರಿದಂತೆ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 440ಕ್ಕೂ ಹೆಚ್ಚು ಮಂದಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಇರುವುದು ಕಂದಾಯ ಇಲಾಖೆಯಿಂದ ತಿಳಿದಿದ್ದು, ಕ್ರಮ ಕೈಗೊಳ್ಳಲು ಅಧಿಕಾರಿಗಳ ಸೂಚನೆಯಂತೆ ಮುಂದಾಗಿದ್ದಾರೆ.