ಸುಂಟಿಕೊಪ್ಪ, ಏ. 28: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರೂ. 23 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಇಂಜಿನಿಯರ್ ಅವರಿಗೆ ಸೂಚಿಸಿದರು. ಇತ್ತೀಚೆಗೆ ಸುಂಟಿಕೊಪ್ಪಕ್ಕೆ ಭೇಟಿ ನೀಡಿ ಜಿ.ಯಂ.ಪಿ. ಶಾಲಾ ಮೈದಾನ ಮತ್ತು ನಾಡು ಕಚೇರಿ ಸಮೀಪದ ನೀರಿನ ಟ್ಯಾಂಕ್ ನಿರ್ಮಿಸುವ ಸ್ಥಳವನ್ನು ಪರಿಶೀಲಿಸಿ ನಂತರ ಮಾತನಾಡಿದರು. ನೂತನ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ರೂ. 14 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಮೈದಾನಕ್ಕೆ ಪ್ರೇಕ್ಷಕರ ಗ್ಯಾಲರಿಯ ಛಾವಣಿಗೆ ರೂ. 4 ಲಕ್ಷ, ನಾರ್ಗಣೆ ಗ್ರಾಮದ ಕೊಳವೆಬಾವಿ, ಮೋಟಾರು ಹಾಗೂ ಪೈಪ್‍ಲೈನ್ ಅಳವಡಿಸಲು ರೂ. 5.50 ಲಕ್ಷ ಅನುದಾನವು ಜಿ.ಪಂ. ವತಿಯಿಂದ ಬಿಡುಗಡೆಗೊಂಡಿದೆ. ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರು, ಡಿ ಗ್ರೂಪ್ ಸಿಬ್ಬಂದಿ ಕೊರತೆ ಇದ್ದು, ಇವರ ನೇಮಕ ಮಾಡುವಂತೆ ಡಿ.ಹೆಚ್.ಓ. ಡಾ. ಮೋಹನ್ ಅವರಿಗೆ ಕರೆ ಮಾಡಿ ಒತ್ತಾಯಿಸಿದರು. ಪಿ.ಡಿ.ಓ. ವೇಣುಗೋಪಾಲ್, ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರಾದ ನಾಗರತ್ನ, ರಜಾಕ್, ಸಿಬ್ಬಂದಿ ಪುನೀತ್, ಶ್ರೀನಿವಾಸ್, ಜಿ.ಪಂ. ಇಂಜಿನಿಯರ್ ಫಯಾಜ್ ಅಹಮ್ಮದ್, ಡಾ. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ ಇದ್ದರು.