ಗೋಣಿಕೊಪ್ಪ ವರದಿ, ಏ. 30 : ಪಾಲಿಬೆಟ್ಟ ಚೆಷೈರ್ ಹೋಂ ಇಂಡಿಯಾ ಕೂರ್ಗ್ ವಿಶೇಷಚೇತನರ ಶಾಲೆಯ ವತಿಯಿಂದ ದಾನಿಗಳ ಸಹಾಯದಿಂದ ತಮ್ಮ ಶಾಲೆಯ ಮಕ್ಕಳಿಗೆ ಸುಮಾರು 2 ಲಕ್ಷಕ್ಕೂ ಅಧಿಕ ಅಗತ್ಯ ನೆರವು ನೀಡಲಾಯಿತು.

25 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು ಪ್ರೋತ್ಸಾಹ, 32 ವಿದ್ಯಾರ್ಥಿಗಳಿಗೆ 2 ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತು ನೀಡುವ ಮೂಲಕ ಲಾಕ್‍ಡೌನ್ ನಡುವೆ ನೆರವು ನೀಡಿ ಪ್ರೋತ್ಸಾಹಿಸಲಾಯಿತು. ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಮಾತನಾಡಿ, ಕೊಡಗು ಜನತೆಯ ಶಿಸ್ತು, ಸ್ವಚ್ಛತೆಯಿಂದ ಕೊರೊನಾ ವೈರಸ್ ಹಿಮ್ಮೆಟ್ಟಲು ಸಹಕಾರಿಯಾಗಿದೆ. ಜನರು ಸೂಚನೆಗಳನ್ನು ಪಾಲಿಸುವುದರಿಂದ ಒತ್ತಡ ಕಡಿಮೆಯಾಗುತ್ತಿದೆ ಎಂದರು. ಸುಮಾರು 2 ತಿಂಗಳಿಗೆ ಬೇಕಾಗುವಷ್ಟು ವಸ್ತುಗಳನ್ನು ವಿದ್ಯಾರ್ಥಿಗಳ ಪಾಲಕರಿಗೆ ವಿತರಣೆ ಮಾಡಲಾಯಿತು.

ಜಿ. ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ತಾ. ಪಂ. ಸದಸ್ಯ ಅಜಿತ್ ಕರುಂಬಯ್ಯ, ಗೋಣಿಕೊಪ್ಪ ಗ್ರಾ. ಪಂ. ಪಿಡಿಒ ಶ್ರೀನಿವಾಸ್, ಚೆಷೈರ್ ಹೋಂ ಸಮಿತಿ ಅಧ್ಯಕ್ಷ ಗೀತಾ ಚಂಗಪ್ಪ, ಮುಖ್ಯಶಿಕ್ಷಕ ಶಿವರಾಜ್, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಉಪಾಧ್ಯಕ್ಷೆ ಪುನೀತಾ ರಾಮಸ್ವಾಮಿ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿತರಿದ್ದರು.