ಮಡಿಕೇರಿ, ಏ. 30: ಕಳೆದ 24 ವರ್ಷಗಳಿಂದ ಕೊಡಗು ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಮುಖ್ಯ ಪೇದೆ ಬಿ.ಎಂ. ರಾಮಪ್ಪ (47) ಅವರು ಸತತ 38 ಸಲ ಬೇರೆಯವರ ಜೀವ ಉಳಿಸಲು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವದರೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.

ಪ್ರಸ್ತುತ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವಿಶೇಷ ಘಟಕದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ರಾಮಪ್ಪ ಅವರು ಮೂಲತಃ ಮಡಿಕೇರಿ ಸಮೀಪದ ಮೇಕೇರಿಯವರಾಗಿದ್ದಾರೆ. ಕಾರ್ಮಿಕ ಕುಟುಂಬವೊಂದರ ಮೊಣ್ಣಪ್ಪ ಹಾಗೂ ಸೀತಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ಕಿರಿಯವರಾದ ಇವರು ಬಡತನದ ನಡುವೆ ಪಿಯುಸಿ ಶಿಕ್ಷಣ ಬಳಿಕ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ.

ಇಲಾಖೆಯ ಸೇರ್ಪಡೆಯೊಂದಿಗೆ ಮಡಿಕೇರಿ ನಗರ ಪೊಲೀಸ್ ಹಾಗೂ ಸಂಚಾರಿ ಠಾಣೆಗಳಲ್ಲಿ ಅನೇಕ ವರ್ಷ ಕರ್ತವ್ಯದೊಂದಿಗೆ ಪೊನ್ನಂಪೇಟೆ, ಸುಂಟಿಕೊಪ್ಪ ಠಾಣೆಗಳಲ್ಲಿ ಕೆಲಸ ನಿರ್ವಹಿಸಿ ಈಗ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಉದ್ಯೋಗಿಯಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕರ್ತವ್ಯದ ನಡುವೆ ರಸ್ತೆ ಅಪಘಾತ, ಅನಾರೋಗ್ಯದಿಂದ ಚಿಕಿತ್ಸೆ ಇತ್ಯಾದಿ ವೇಳೆ ‘ಎಬಿ+’ ರಕ್ತದ ಅವಶ್ಯಕತೆ ಎದುರಾದಾಗ ತಕ್ಷಣ ಸ್ಪಂದಿಸುವ ರಾಮಪ್ಪ ಇನ್ನೊಬ್ಬರ ಜೀವ ರಕ್ಷಣೆಗಾಗಿ ರಕ್ತ ನೀಡಿ ಪೊಲೀಸ್ ಬಳಗ ಹಾಗೂ ನೊಂದ ಕುಟುಂಬಗಳಿಂದ ಶ್ಲಾಘನೆಗೆ ಒಳಗಾಗಿದ್ದಾರೆ.

ಸಾಮಾನ್ಯವಾಗಿ ಆರೋಗ್ಯ ವಂತರಾಗಿರುವ ರಾಮಪ್ಪ ಅವರಿಗೆ ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ನೀಡುವ ಅವಕಾಶ ಎದುರಾಗಿದ್ದು; ಇದೀಗ 38ನೇ ಬಾರಿ ರಕ್ತಕೊಟ್ಟು ತಮ್ಮ ಇಲಾಖೆಯ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಂದಲೂ ಪ್ರಶಂಸೆಯೊಂದಿಗೆ ಶಹಬ್ಬಾಸ್‍ಗಿರಿ ಪಡೆದುಕೊಂಡಿದ್ದಾರೆ.