ವೀರಾಜಪೇಟೆ, ಏ. 30: ಇರ್ಪು ಜಲಪಾತ ರಸ್ತೆ ನಿರ್ಮಾಣದ ಕಾಮಗಾರಿಗೆ ಪಿರಿಯಾಪಟ್ಟಣ ಹಾಗೂ ಹುಣಸೂರು ಭಾಗಗಳಿಂದ ಬಂದ 13 ಮಂದಿ ಕಾರ್ಮಿಕರನ್ನು ಮುಂಜಾಗ್ರತಾ ಕ್ರಮವಾಗಿ ವೀರಾಜಪೇಟ ಬಿ.ಸಿ.ಎಂ ವಸತಿ ನಿಲಯದಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.
ಏಪ್ರಿಲ್ 23 ಮತ್ತು 24 ರಂದು ಹುಣಸೂರಿನ ವಿಜಯನಗರ ಬಡಾವಣೆಯ ದೇವಯ್ಯ, ವಿನೋಬ ಕಾಲೋನಿಯ ವೆಂಕಟಯ್ಯ, ದೊಡ್ಡೆಗೌಡ, ವೆಂಕಟರಾಜು, ಜವರೆಗೌಡ, ಕಾಳೇಗೌಡ, ಜಯರಾಮ, ಮಾರ್ಕಂಡಯ್ಯ, ಪಿರಿಯಾಪಟ್ಟಣದ ದೇವೇಗೌಡ ಕೊಪ್ಪಲಿನ ವೀರಸ್ವಾಮಿ, ತೋಪಯ್ಯ, ಮಹಾಶೆಟ್ಟಿ, ಮಂಜೇಶ್, ಪೊನ್ನುಸ್ವಾಮಿ ಇವರುಗಳು ಇರ್ಪು ದೇವಾಲಯಕ್ಕೆ ತೆರಳುವ ರಸ್ತೆ ಕಾಮಾಗಾರಿಯಲ್ಲಿ ತೊಡಗಿದ್ದರು. ಮ್ಯೆಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಅತಿಯಾಗಿ ಇರುವುದರಿಂದ ಶ್ರೀಮಂಗಲ ಗ್ರಾಮಸ್ಥರು ತಹಶೀಲ್ದಾರ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅವರುಗಳನ್ನು ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಪ್ರಾರಂಭದಲ್ಲಿ ಇರ್ಪು ರಾಮೇಶ್ವರ ದೇವಾಲಯದ ವಸತಿ ನಿಲಯದಲ್ಲಿ ಇವರುಗಳನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಆಹಾರ ಪೊರೈಕೆ, ಆರೋಗ್ಯ ತಪಾಸಣೆ ಸರಕಾರದ ಇತರ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಅವರುಗಳನ್ನು ವೀರಾಜಪೇಟೆಯಲ್ಲಿ ತಾಲೂಕು ತಹಶೀಲ್ದಾರ್ ಮೂಲಕ ಕ್ವಾರಂಟೈನ್‍ಗೆ ಅವಕಾಶ ಮಾಡಲಾಗಿದೆ.
ಕಾರ್ಮಿಕರುಗಳನ್ನು ಕರೆ ತರುವ ಸಂದರ್ಭದಲ್ಲಿ ಆರ್,ಎಫ್,ಓ ವಿರೇಂದ್ರ, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಕಂದಾಯ ಪರಿವೀಕ್ಷಕ ಸುದೀಂದ್ರ, ಗ್ರಾಮ ಲೆಕ್ಕಾಧಿಕಾರಿ ಬಸವನಗೌಡ ಹಾಜರಿದ್ದರು.
ಅರಣ್ಯಾಧಿಕಾರಿಗೆ ನೋಟೀಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆ ಹುಣಸೂರು ವ್ಯಾಪ್ತಿಯ ವೀರನ ಹೊಸಳ್ಳಿ ಅರಣ್ಯ ತಪಾಸಣಾ ಗೇಟ್ ಮೂಲಕ ಪ್ರವೇಶಿಸಲು ಪಾಸ್ ನೀಡಲಾಗಿದೆ. ಪಾಸ್ ನೀಡಿದ ವಲಯ ಜಿಲ್ಲಾಡಳಿತದಿಂದ ಶೋಕಾಸ್ ನೋಟೀಸ್ ಜಾರಿ ಮಾಡುವದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಟ್ವೀಟ್ ಮಾಡಿದ್ದಾರೆ.