ಬೆಂಗಳೂರು, ಏ. 30: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಮೇ 5 ರಂದು, ಈಗಾಗಲೇ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ

ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದೆ. ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಯನ್ನು ಕಾಲೇಜುಮಟ್ಟದಲ್ಲಿಯೇ ನಿರ್ವಹಿಸಲು ಮಾನದಂಡಗಳನ್ನು ಮುಂದೆ ತಿಳಿಸಲಾಗುವುದು ಎಂದೂ ಸುತ್ತೋಲೆ ಸ್ಪಷ್ಟ ಪಡಿಸಿದೆ.

ಶುಲ್ಕ ಹೆಚ್ಚಿಸುವ ಹಾಗಿಲ್ಲ

ಖಾಸಗಿ ಪಿಯು ಕಾಲೇಜುಗಳು ಇಂತಹ ಸಾಮಾಜಿಕ ಸಂಕಷ್ಟದ ಸಂದರ್ಭ ದಲ್ಲಿ ಅಸಹಾಯಕ ಪೋಷಕರಿಂದ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಒತ್ತಾಯಿಸಬಾರದು, ಇಚ್ಛಿಸುವ ಪೋಷಕರಿಂದ ಕಂತುಗಳ ಮೂಲಕ ಸ್ವೀಕರಿಸತಕ್ಕದ್ದು ಹಾಗೂ 2020-21 ನೇ ಈ ಸಾಲಿಗೆ ಯಾವುದೇ ಕಾರಣಕ್ಕೂ ಬೋಧನ ಶುಲ್ಕವನ್ನು ಹೆಚ್ಚಿಸಬಾರದೆಂದು ಇಲಾಖೆಯು ನಿರ್ದೇಶನ ನೀಡಿದೆ.

ಒಂದು ವೇಳೆ ಈ ಬಗ್ಗೆ ದೂರುಗಳು ಬಂದಲ್ಲಿ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಕ್ಕೆ ಮುಂದಾಗಲಾಗುವುದೆಂದು ಪದವಿಪೂರ್ವ ಶಿಕ್ಷಣ ನಿರ್ದೇಶಕರು ತಮ್ಮ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.