ಸೋಮವಾರಪೇಟೆ, ಏ. 30: ಲಾಕ್‍ಡೌನ್ ಹಿನ್ನೆಲೆ ಸಮಯ ಕಳೆಯಲು ಹಾರಂಗಿ ಹಿನ್ನೀರಿನಲ್ಲಿ ಗಾಳದ ಮೂಲಕ ಮೀನು ಹಿಡಿದ ಯುವಕರಿಂದಾಗಿ ಮೀನುಗಾರರ ಸಹಕಾರ ಸಂಘಕ್ಕೆ ಸಂಕಷ್ಟ ಸನ್ನಿವೇಶ ಸೃಷ್ಟಿಯಾಗಿದೆ.
ತೀರಾ ಅಪರೂಪದ ತಳಿಯಾದ ಮಹಶೀರ್ ಮೀನನ್ನು ನಾಕೂರು ಸಮೀಪ ಹಾರಂಗಿ ಹಿನ್ನೀರಿನಿಂದ ಹಿಡಿದು, ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಸ್ಥಳೀಯ ಯುವಕ ನೋರ್ವನ ಮನೆಗೆ ಮೀನುಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ನೋಟೀಸ್ ನೀಡಲಾಗಿದೆ.
ನಿನ್ನೆ ದಿನ ನಾಕೂರಿನ ಹಿನ್ನೀರಿನಲ್ಲಿ ಗಾಳ ಹಾಕಿದ್ದ ಸಂದರ್ಭ ಸುಮಾರು 38 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಲುಕಿಕೊಂಡಿದ್ದು, ಅದನ್ನು ನೀರಿನಿಂದ ಹೊರತೆಗೆದು ವೀಡಿಯೋ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಂದು ಮೀನುಗಾರಿಕಾ ಇಲಾಖಾಧಿಕಾರಿಗಳು ಮುಳ್ಳೂರು ಗ್ರಾಮದ ಯುವಕನ ಮನೆಗೆ ಭೇಟಿ ನೀಡಿದ್ದು, ಆತ ಮನೆಯಲ್ಲಿ ಇಲ್ಲದ್ದರಿಂದ ಆತನ ಪೋಷಕ ರೊಂದಿಗೆ ಮಾಹಿತಿ ಪಡೆದಿದ್ದಾರೆ.
ಹಾರಂಗಿ ಹಿನ್ನೀರಿನಲ್ಲಿ ಮೀನುಗಾರಿಕೆ ನಡೆಸಲು ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ಮೀನು ಪಾಶ್ವಾರು ಹಕ್ಕು ನೀಡಿದ್ದು, ಇಲ್ಲಿರುವ ಅಪರೂಪದ ತಳಿಗಳ ಮೀನನ್ನು ಹಿಡಿಯದಂತೆಯೂ ಷರತ್ತು ವಿಧಿಸಲಾಗಿದೆ. ಈ ಷರತ್ತಿನಲ್ಲಿ ಅಪರೂಪದ ತಳಿಯಾದ ಮಹಶೀರ್ ಮೀನು ಒಳಗೊಂಡಿದ್ದು, ಇದೇ ಮೀನನ್ನು ಹಿನ್ನೀರಿನಿಂದ ಹಿಡಿದಿ ರುವದರಿಂದ ಸಂಘಕ್ಕೆ ಹೊಸ ತಲೆನೋವು ಬಂದಂತಾಗಿದೆ.
ಅಳಿವಿನಂಚಿನಲ್ಲಿರುವ ಮಹಶೀರ್ ತಳಿಯನ್ನೂ ಮೀನುಗಾರಿಕಾ ಇಲಾಖೆ ವೃದ್ಧಿಗೊಳಿಸಲು ಪ್ರಯತ್ನಿಸುತ್ತಲೇ ಇದೆ. ಇದೇ ಕಾರ್ಯಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿಯನ್ನು ಮೀನುಗಳ ಸಂವರ್ಧನೆಗೆ ಬಳಸಲಾಗುತ್ತಿದೆ.
ಈ ಮಧ್ಯೆ ಅಪರೂಪದ, ಸುಮಾರು 20 ವರ್ಷಕ್ಕೂ ಅಧಿಕ ಪ್ರಾಯದ್ದು ಎಂದು ಭಾವಿಸಲಾಗಿರುವ ಮಹಶೀರ್ ಮೀನನ್ನು ಹಿಡಿದಿರುವದು ಇಲಾಖೆಯ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಅವರು ಇಂದು ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೀನುಗಾರಿಕೆಗೆ ಬಳಸಿದ್ದ ಗಾಳವನ್ನು ವಶಕ್ಕೆ ಪಡೆದಿದ್ದಾರೆ.
ಇದರೊಂದಿಗೆ ಈ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಪರವಾನಗಿ ಪಡೆದಿರುವ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ನೋಟೀಸ್ ಜಾರಿ ಮಾಡಿದ್ದು, ಸಂಘದ ನಿರ್ಲಕ್ಷ್ಯದಿಂದ ಅಪರೂಪದ ಮಹಶೀರ್ ಮೀನನ್ನು ಹಿಡಿಯಲಾಗಿದೆ. ನಿಬಂಧನೆಗಳಿಗೆ ವಿರುದ್ಧವಾದ ಘಟನೆ ನಡೆದಿರುವ ದರಿಂದ ಸಂಘಕ್ಕೆ ನೀಡಿದ ಪರವಾನಗಿ ಯನ್ನು ಯಾಕೆ ರದ್ದುಪಡಿಸಬಾರದು? ಎಂದು ನೋಟೀಸ್‍ನಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿರುವ ಏಕೈಕ ಮಹಶೀರ್ ಮೀನು ತಳಿ ಸಂವರ್ಧನಾ ಕೇಂದ್ರ ಎಂಬ ಖ್ಯಾತಿಗೆ ಭಾಜನ ವಾಗಿರುವ ಹಾರಂಗಿ ಜಲಾಶಯ ಸಮೀಪದಲ್ಲಿರುವ ಮಹಶೀರ್ ತಳಿ ಸಂವರ್ಧನಾ ಕೇಂದ್ರಕ್ಕೆ ಸರ್ಕಾರದ ಅನುದಾನವೂ ಬರುತ್ತಿದ್ದು, ಈ ಅನುದಾನದಲ್ಲಿ ಮಹಶೀರ್ ತಳಿಸಂವರ್ಧನೆಗೆ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ವಾರ್ಷಿಕ 35 ಸಾವಿರಕ್ಕೂ ಅಧಿಕ ಮೀನು ಮರಿಗಳನ್ನು ಇಲ್ಲಿಂದ ರಾಜ್ಯದ ವಿವಿಧ ಭಾಗಗಳಿಗೆ ರವಾನಿಸಲಾಗುತ್ತಿದೆ.
ಹಾರಂಗಿ ಜಲಾಶಯದಲ್ಲಿ ಮೀನುಗಾರಿಕೆಗಾಗಿ 5 ವರ್ಷಗಳ ಅವಧಿಗೆ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ವಾರ್ಷಿಕ 2.25 ಲಕ್ಷದಂತೆ ಗುತ್ತಿಗೆ ನೀಡಲಾಗಿದ್ದು, 2020-21ಕ್ಕೆ ಈ ಅವಧಿ ಮುಕ್ತಾಯ ಗೊಳ್ಳಲಿದೆ. ಈ ಮಧ್ಯೆ ಮಹಶೀರ್ ಮೀನನ್ನು ಅಕ್ರಮವಾಗಿ ಹಿಡಿದಿರುವ ಪ್ರಕರಣ ನಡೆದಿರುವದರಿಂದ ಸಂಘದ ಅಧ್ಯಕ್ಷರಿಗೆ ಇಲಾಖೆಯಿಂದ ನೋಟೀಸ್ ನೀಡಲಾಗಿದೆ.
ಜಲಾಶಯದಲ್ಲಿ ಅಕ್ರಮವಾಗಿ ಮಹಶೀರ್ ಮೀನು ಹಿಡಿದಿರುವ ಯುವಕರ ತಂಡದ ವಿರುದ್ಧ ಪೊಲೀಸ್ ದೂರು ನೀಡಲಾಗುವದು ಎಂದು ಸಂಘದ ಅಧ್ಯಕ್ಷರು ತಿಳಿಸಿರುವದಾಗಿ ಮೀನುಗಾರಿಕಾ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಾಕ್‍ಡೌನ್ ಸಮಯ ದಲ್ಲಿ ಮೋಜಿಗಾಗಿ ಮೀನುಗಾರಿಕೆ ಮಾಡಿದ ಯುವಕರಿಗೆ ‘ಮಹಶೀರ್’ ಮೀನಿನ ಮೂಲಕ ಹೊಸ ಸಮಸ್ಯೆ ಎದುರಾಗಿದೆ. - ವಿಜಯ್