ಭಾಗಮಂಡಲ, ಏ. 28: ಕೇರಳದ ಯುವಕನೊಬ್ಬ ಭಾಗಮಂಡಲದ ಯುವತಿಯನ್ನು ಈಚೆಗೆ ವಿವಾಹವಾಗಿದ್ದಾನೆ. ಮದುವೆಗೆ ಹಾಜರಾದವರು ಕೇವಲ 20 ಮಂದಿ. ಲಾಕ್‍ಡೌನ್ ನಿರ್ಬಂಧದಿಂದಾಗಿ ವರನ ತಂದೆ, ತಾಯಿ ಕೇರಳದಿಂದ ಬರಲಾಗದೇ ಗಡಿಯಲ್ಲಿ ಸಿಲುಕಿ ಕಾರ್ಯಕ್ರಮವನ್ನು ಮೊಬೈಲಲ್ಲಿ ವೀಕ್ಷಿಸಿ ಆಶೀರ್ವದಿಸಿದರು.
ತಾ. 26 ರಂದು ಭಾಗಮಂಡಲದ ಗೌಡ ಸಮಾಜದಲ್ಲಿ ರಮೇಶ್ ರೈ ಮತ್ತು ಶೋಭಾ ರೈ ಅವರ ಪುತ್ರಿ ಸ್ಪಂದನಾ ರೈ ಅವರ ವಿವಾಹವು ಕೇರಳದ ಪೆರಂಪಡವು ನಿವಾಸಿ ಬಿಂದುನಾಯರ್ ಮತ್ತು ಸಜೀವನ್ ನಾಯರ್ ದಂಪತಿಗಳ ಪುತ್ರ ಸನೂಪ್‍ನಾಯರ್ ನೊಂದಿಗೆ ನಿಶ್ಚಯವಾಗಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿವಾಹ ಸಮಾರಂಭ ಸರಳವಾಗಿ ನೆರವೇರಿತು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವಕ ಮತ್ತು ಯುವತಿ ಅನುಮತಿ ಪಡೆದು ಭಾಗಮಂಡಲ ತಲುಪಿದ್ದರು. ವರನ ತಂದೆತಾಯಿ ಬೆಂಗಳೂರಿನಿಂದ ಹೊರಟು ಕೇರಳದ ಐನ್ ಮನೆಯಲ್ಲಿ ಶಾಸ್ತ್ರಗಳನ್ನು ಪೂರೈಸಿ ವಿವಾಹ ಸಮಾರಂಭಕ್ಕೆ ಹೊರಟಿದ್ದರು. ಕೇರಳದಿಂದ ಭಾಗಮಂಡಲಕ್ಕೆ ಬರಲು ಸಿದ್ಧತೆ ನಡೆಸಿದ್ದರು. ಮಾಂಗಲ್ಯಸರ ಅವರ ಬಳಿ ಇತ್ತು. ನಿರ್ಬಂಧದಿಂದಾಗಿ ಕರ್ನಾಟಕ-ಕೇರಳ ಗಡಿಯಲ್ಲಿ ವರನ ತಂದೆ, ತಾಯಿ ಮತ್ತು ತಂಗಿ ಉಳಿಯುವಂತಾಯಿತು.
ಇತ್ತ ವಧೂ ವರರು ಭಾಗಮಂಡಲದಲ್ಲಿ ಅಕ್ಕಸಾಲಿಗರ ಬಳಿ ತಾತ್ಕಾಲಿಕ ತಾಳಿ ಚೈನ್ ಮಾಡಿಸಿ ವಿವಾಹ ಪೂರೈಸಿ ಕೊಂಡರು. ವರನ ತಂದೆ, ತಾಯಿ ಮೊಬೈಲ್ ಮೂಲಕ ಆನ್‍ಲೈನ್‍ನಲ್ಲಿ ವಿವಾಹ ಕಾರ್ಯಕ್ರಮ ವೀಕ್ಷಿಸಿ ವಧು ವರರನ್ನು ಆಶೀರ್ವದಿಸಿ ತೃಪ್ತರಾಗುವಂತಾಯಿತು.
- ಸುನಿಲ್ ಕುಯ್ಯಮುಡಿ