ಮಡಿಕೇರಿ, ಏ. 27: ಕೊಡಗು ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಗ್ರಾಮೀಣ ವೈದ್ಯ ಸಿಬ್ಬಂದಿಗೆ, ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಆರೋಗ್ಯ ಕಾರ್ಯಕರ್ತರನ್ನು ‘ಕೊರೊನಾ ವಾರಿಯರ್ಸ್’ ಎಂದು ಬೆನ್ನು ತಟ್ಟಿ ಅವರಿಗೆ ಯಾವುದೇ ತೊಂದರೆ ಎದುರಾಗದಂತೆ ಅನುದಾನ ಘೋಷಿಸಿದ್ದಾರೆ.

ಹೀಗಿದ್ದರೂ ಇಲಾಖೆಯಿಂದ ಬಹುತೇಕ ಗ್ರಾಮೀಣ ಆರೋಗ್ಯ ಕಾರ್ಯಕರ್ತರಿಗೆ ಇಂದಿಗೂ ಸರಿಯಾಗಿ ಮಾಸ್ಕ್, ಸ್ಯಾನಿಟೈಸರ್ ಸಹಿತ ವೇತನ ಕೂಡ ಪಾವತಿಯಾಗುತ್ತಿಲ್ಲವೆಂದು ಮೂಲಗಳಿಂದ ಗೊತ್ತಾಗಿದೆ.

ಹೀಗಾಗಿ ಆರೋಗ್ಯ ಕಾರ್ಯಕರ್ತರಿಗೆ ತಮ್ಮ ಕುಟುಂಬದೊಂದಿಗೆ ತುತ್ತು ಕೂಳಿಗೂ ಸಂಕಷ್ಟ ಪಡುವಂತಾಗಿದೆ ಎಂದು ನೊಂದವರ ಅಳಲು ಒಂದೆಡೆಯಾದರೆ, ಜವಾಬ್ದಾರಿ ಸ್ಥಾನದಲ್ಲಿರುವ ವೇತನ ಬಟವಾಡೆ ಗುಮಾಸ್ತರ ನಿರ್ಲಕ್ಷ್ಯವೂ ಈ ಪರಿಸ್ಥಿತಿಗೆ ಕಾರಣವೆಂಬ ಆರೋಪವಿದೆ.