ಆಯುರ್ವೇದದ ಕಡೆ ಗಮನ ಕೊಡಿ

ನವದೆಹಲಿ, ಏ. 26: ಯೋಗದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಜಗತ್ತು ಆಯುರ್ವೇದದ ಉಪಯೋಗಗಳನ್ನೂ ಸ್ವೀಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಾ. 26 ರಂದು ಮನ್ ಕಿ ಬಾತ್‍ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕು ತಡೆ ಬಗ್ಗೆ ದೇಶದ ಜನತೆಯೊಂದಿಗೆ ಹಲವು ಅಂಶಗಳನ್ನು ಹಂಚಿ ಕೊಂಡರು. ಇದೇ ವೇಳೆ ಭಾರತದ ಸಂಸ್ಕೃತಿಯ ಶಕ್ತಿಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ, ಯೋಗದ ನಂತರ ಜಗತ್ತು ಭಾರತದ ಪುರಾತನ ಪದ್ಧತಿಯ ವೈದ್ಯ ಆಯುರ್ವೇದದ ಅಂಶಗಳನ್ನು ಒಪ್ಪಿಕೊಳ್ಳಲಿದೆ. ಯುವಕರು ಅವುಗಳನ್ನು ವಿದೇಶಗಳಿಗೆ ವೈಜ್ಞಾನಿಕವಾಗಿ ಅರ್ಥಮಾಡಿಸುವ ಕೆಲಸವನ್ನು ಯುವಕರು ಕೈಗೆತ್ತಿಕೊಳ್ಳಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ. ಭಾರತದ ವೈಭವದ ಸಂಪ್ರದಾಯ, ಪದ್ಧತಿಗಳ ಶಕ್ತಿಯನ್ನು ಗುರುತಿಸಲು ಭಾರತೀಯರೇ ನಿರಾಕರಿಸುವುದು ದುರ ದೃಷ್ಟಕರ, ಆದರೆ ಅದೇ ಅಂಶಗಳನ್ನು ವಿದೇಶಿಗಳು ಪುರಾವೆ ಆಧಾರಿತ ಸಂಶೋಧನೆಯ ಮೂಲಕ ಹೇಳಿ, ನಮ್ಮ ಸೂತ್ರವನ್ನೇ ನಮಗೆ ಕಲಿಸಿದರೆ ಅದನ್ನು ಒಪ್ಪಿಕೊಳ್ಳುತ್ತೇವೆಂದು ಮೋದಿ ಹೇಳಿದ್ದಾರೆ.

ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಮನವಿ

ಬೆಂಗಳೂರು, ಏ. 26: ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಮತ್ತು ಇತರರಿಗೆ ಹರಡುವುದನ್ನು ತಡೆಗಟ್ಟಲು, ಎಲ್ಲರೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದೇ ಏಕೈಕ ಮಾರ್ಗ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ, ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿ ವರ್ಗದವರು ಕಡ್ಡಾಯವಾಗಿ ಈ ನಿಯಮವನ್ನು ಅನುಸರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಸಿಆರ್‍ಪಿಎಫ್ ಯೋಧರಿಗೆ ಕೊರೊನಾ

ನವದೆಹಲಿ, ಏ. 26: ಅತೀ ದೊಡ್ಡ ಅರಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್)ಯ ಇನ್ನೂ ಹದಿನೈದು ಯೋಧರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತ ಸಿಆರ್‍ಪಿಎಫ್ ಸಿಬ್ಬಂದಿ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ನರ್ಸಿಂಗ್ ಸಹಾಯಕರಾಗಿ ಆಗಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಸೇರಿದಂತೆ 9 ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ಘೋಷಿಸಲಾಗಿತ್ತು. ಈಗ 31ನೇ ಬೆಟಾಲಿಯನ್‍ಗೆ ಸೇರಿದ 15 ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರಿಗೂ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಓರ್ವ ಸಹಾಯಕ ಸಬ್ ಇನ್ಸ್‍ಪೆಕ್ಟರ್, ನಾಲ್ವರು ಮುಖ್ಯ ಪೇದೆಗಳು ಸೇರಿದಂತೆ 15 ಸಿಆರ್‍ಪಿಎಫ್ ಸಿಬ್ಬಂದಿಗೆ ಇಂದು ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಶುಶ್ರೂಷಕ ಸಹಾಯಕ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ನಿಯೋಜಿಸಲಾಗಿರುವ 162ನೇ ಬೆಟಾಲಿಯನ್‍ಗೆ ಸೇರಿದವರಾಗಿದ್ದಾರೆ. ರಜೆಯ ಮೇಲೆ ರಾಷ್ಟ್ರ ರಾಜಧಾನಿ ಪ್ರದೇಶದಕ್ಕೆ ಸೇರಿದ ನೋಯ್ಡಾದಲ್ಲಿದ್ದರು.

ಪ್ರತಿದಿನ 1 ಲಕ್ಷ ಪರೀಕ್ಷೆ ನಡೆಯಬೇಕು

ನವದೆಹಲಿ, ಏ. 26: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಸರ್ಕಾರ ಪ್ರತಿ ದಿನ 1 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಂಕು ಹರಡದಂತೆ ತಡೆಗಟ್ಟಲು ಯಾದೃಚ್ಛಿಕ ಸಾಮೂಹಿಕ ಪರೀಕ್ಷೆ ಪ್ರಮುಖವಾದ ಅಂಶ ಎಂಬುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಪರೀಕ್ಷಾ ಕಿಟ್‍ಗಳ ದಾಸ್ತಾನು ಇದ್ದರೂ ದಿನಕ್ಕೆ ಪ್ರಸ್ತುತ 40,000 ದಿಂದ 1 ಲಕ್ಷ ಪರೀಕ್ಷೆ ನಡೆಸಲು ಅಡಚಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕ್ಷಿಪ್ರ ರೀತಿಯಲ್ಲಿ ಕ್ರಮ ಕೈಗೊಂಡು ಅಡಚಣೆಯನ್ನು ನಿವಾರಿಸಬೇಕಾದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳ ವೈದ್ಯ ಸೋಂಕಿಗೆ ಬಲಿ

ಕೋಲ್ಕತಾ, ಏ. 26: ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಪಶ್ಚಿಮ ಬಂಗಾಳ ಸರ್ಕಾರದ ಹಿರಿಯ ವೈದ್ಯರೊಬ್ಬರು ಭಾನುವಾರ ಕೋವಿಡ್-19ಗೆ ಬಲಿಯಾಗಿದ್ದಾರೆ. ಅಲ್ಲದೆ ಅವರೊಂದಿಗೆ 34 ವರ್ಷದ ಮತ್ತೊಬ್ಬ ವ್ಯಕ್ತಿ ಸಹ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದಾರೆ. ಆರೋಗ್ಯ ಸೇವೆಗಳ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ 60 ವರ್ಷದ ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ತಾ. 18 ರಂದು ಅವರನ್ನು ಸಾಲ್ಟ್‍ಲೇಕ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಎರಡು ಪೊಲೀಸ್ ಠಾಣೆಗಳೇ ಬಂದ್

ಕೊಯಂಬತ್ತೂರ್, ಏ. 26: ತಮಿಳುನಾಡಿನ ಆರು ಪೊಲೀಸ್ ಸಿಬ್ಬಂದಿಗಳಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಎರಡು ಪೊಲೀಸ್ ಠಾಣೆಗಳನ್ನೇ ಬಂದ್ ಮಾಡಲಾಗಿದೆ. ಚೆನ್ನೈನ ಪೊದನೂರ್ ಹಾಗೂ ಕುನಿಯಮುತೂರ್‍ನ ಎರಡು ಪೊಲೀಸ್ ಠಾಣೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕೊರೊನಾ ಸೋಂಕು ದೃಢಪಟ್ಟಿರುವ ಪೊಲೀಸ್ ಸಿಬ್ಬಂದಿಗಳಿಗೆ ಇಎಸ್‍ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಅವರನ್ನು ಖಾಸಗಿ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಆರು ಮಂದಿಯ ಜೊತೆ ಸಂಪರ್ಕದಲ್ಲಿದ್ದ 105 ಪೊಲೀಸ್ ಸಿಬ್ಬಂದಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಕೊರೊನಾ ಸೋಂಕು ಕಂಡು ಬಂದಿಲ್ಲ.

ರಾಜ್ಯದಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಬೆಂಗಳೂರು, ಏ. 26: ಕರ್ನಾಟಕದಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿಸಿದ್ದು, ಕೋವಿಡ್-19ಗೆ ಭಾನುವಾರ ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಹಿಳೆ, ರೋಗಿ ನಂಬರ್ 465 ಆಗಿದ್ದು, ತಾ. 24 ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಾ. 25 ರಂದು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ. ಈ ಮಹಿಳೆ ರಕ್ತಸ್ರಾವ ಮತ್ತು ಉಸಿರಾಟದ ಸಮಸ್ಯೆಯಿಂದ ಮೂಡಲಪಾಳ್ಯದ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್-19 ಪಾಸಿಟಿವ್ ಬಂದ ನಂತರ ಆ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ರವಿಕುಮಾರ್ ಸುರಪುರ್ ಹೇಳಿದ್ದಾರೆ.

ಚಾಲಕನಿಂದ 24 ಮಂದಿಗೆ ಸೋಂಕು

ಅಮರಾವತಿ, ಏ. 26: ಆಂಧ್ರಪ್ರದೇಶದ ವಿಜಯವಾಡ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಇಸ್ಪೀಟ್ ಆಡಿದ ಟ್ರಕ್ ಚಾಲಕನೋರ್ವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತ ಪರಿಣಾಮ 24 ಜನರಿಗೆ ಕೊರೊನಾ ಸೋಂಕು ಹರಡಿದೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಮತ್ತೋರ್ವ ಟ್ರಕ್ ಚಾಲಕನೋರ್ವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತ ಪರಿಣಾಮ 15 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.