ಮಡಿಕೇರಿ, ಏ. 25 ಕಳೆದ ಎರಡು ವರ್ಷಗಳ ಅತಿವೃಷ್ಟಿಯ ಹೊಡೆತ ಮತ್ತು ಇದೀಗ ಕೊರೊನಾ ಲಾಕ್ ಡೌನ್‍ನಿಂದಾಗಿ ಮಡಿಕೇರಿ ನಗರದ ಜನತೆ, ವಾಣಿಜ್ಯೋದ್ಯಮಿ ಗಳು ಹಾಗೂ ಸ್ವಂತ ಕಟ್ಟಡಗಳ ಮಾಲೀಕರುಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಗರಸಭೆ ತೆರಿಗೆ ವಿನಾಯಿತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಜನತೆಯ ವಾಣಿಜ್ಯ ಹಾಗೂ ಗೃಹೋಪಯೋಗಿ ಕಟ್ಟಡಗಳ ತೆರಿಗೆ ವಿನಾಯಿತಿ ಕನಿಷ್ಟ ಶೇ. 50 ರಷ್ಟು ಮತ್ತು ನೀರಿನ ತೆರಿಗೆಯಲ್ಲೂ ವಿನಾಯಿತಿ ನೀಡಬೇಕೆಂದು ತಿಳಿಸಿದ್ದಾರೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುವ ಪಡಿತರ ಸೌಲಭ್ಯಗಳನ್ನು ಎಪಿಎಲ್ ಕಾರ್ಡುದಾರರಿಗೂ ನೀಡುವ ಮೂಲಕ ಮಧ್ಯಮ ವರ್ಗದ ಜನರ ನೆರವಿಗೆ ಬರಬೇಕು. ಸ್ವಂತ ಕಟ್ಟಡ ಹೊಂದಿರುವ ಮಾಲೀಕರು ಹಾಗೂ ಸಣ್ಣಪುಟ್ಟ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಮಂದಿಯ ಸ್ಥಿತಿ ಶೋಚನೀಯ ವಾಗಿದೆ. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದೆ ಇರುವುದರಿಂದ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಖುದ್ದು ಮುತುವರ್ಜಿ ವಹಿಸಿ ನಗರಸಭಾ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.