ಮಡಿಕೇರಿ, ಏ. 25: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿಂದಾಗಿ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ವಾರದ ಮೂರು ದಿನಗಳಲ್ಲಿ ಜಿಲ್ಲಾಡಳಿತ ಕಲ್ಪಿಸಿದ್ದ ಸಮಯಾವಕಾಶವನ್ನು ಎರಡು ಗಂಟೆ ವಿಸ್ತರಿಸಲಾಗಿದೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗಿದ್ದ ಸಮಯವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿಸಿ; ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಲವು ಷರತ್ತುಗಳೊಂದಿಗೆ ಜಿಲ್ಲೆಯಲ್ಲಿ ಗಣಿಗಾರಿಕೆ, ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಗಣಿಗಾರಿಕೆ, ಖನಿಜ ಉತ್ಪಾದನೆ, ಸಾಗಾಣಿಕೆಗೆ ಅವಕಾಶ ಜಿಲ್ಲೆಯಲ್ಲಿ ಶೀಘ್ರದಲ್ಲೇ ಮಳೆಗಾಲ ಪ್ರಾರಂಭವಾಗಲಿದ್ದು, ಇದಕ್ಕೆ ಮುಂಚಿತವಾಗಿ ಹಾಲಿ ಸ್ಥಗಿತಗೊಂಡಿ ರುವ ರಸ್ತೆ, ಸೇತುವೆ, ತಡೆಗೋಡೆ, ಕಟ್ಟಡ ನಿರ್ಮಾಣ ಮುಂತಾದ ಕಾರ್ಯಗಳನ್ನು ಪೂರ್ಣಗೊಳಿ ಸಬೇಕಾದ ಅನಿವಾ ರ್ಯತೆ ಇರುತ್ತದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಈ ಕೆಳ ಕಂಡಂತೆ ಷರತ್ತು ಬದ್ದವಾಗಿ ಗಣಿಗಾರಿಕೆ, ಖನಿಜ ಉತ್ಪಾದನೆ ಮತ್ತು ಸಾಗಾಣಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನುಮತಿ ಹೊಂದಿರುವ ಮತ್ತು ಪರವಾನಗಿ ಊರ್ಜಿತದಲ್ಲಿರುವ ಕ್ರಷರ್ ಘಟಕಗಳು, ಕ್ವಾರಿಗಳು ಮಾತ್ರ ಕಾರ್ಯಚರಿಸಬೇಕು. ಈ ಘಟಕಗಳಲ್ಲಿ ಒಟ್ಟು ಕಾರ್ಮಿಕ ಬಲದ ಗರಿಷ್ಠ ಶೇ.40 ಮೀರದಂತೆ ಕಾರ್ಯಚರಿಸುವುದು. ಮುಂದಿನ ಆದೇಶದವರೆಗೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತರಲು ಅವಕಾಶ ಇರುವುದಿಲ್ಲ. ಈ ಕಾರ್ಯಗಳಿಗೆ ಸಾಧ್ಯವಾದಷ್ಟು ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಪ್ರಯಾಣಿಕರ ವಾಹನದಲ್ಲಿ ಮಾತ್ರ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಕರೆತರಬೇಕು. ಪ್ರಯಾಣದ ವೇಳೆ ವಾಹನದ ಒಟ್ಟು ಆಸನ ಸಂಖ್ಯೆಯ ಶೇ.40 ಮೀರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸದ ಸ್ಥಳಕ್ಕೆ ಬರಲು ಅವಕಾಶ ಇರುತ್ತದೆ. ಪ್ರತಿ ನಿತ್ಯ ಸಂಚಾರ ಮಾಡಲು ಅವಕಾಶ ಇರುವುದಿಲ್ಲ.
ಕಾರ್ಮಿಕರಿಗೆ ಕೆಲಸದ ಸ್ಥಳದ ಆಸುಪಾಸಿನಲ್ಲಿಯೇ ವಸತಿ ಸೌಕರ್ಯ, ಶೌಚಾಲಯ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಸಂಬಂಧಪಟ್ಟ ಗುತ್ತಿಗೆದಾರರು ಕಡ್ಡಾಯವಾಗಿ ಕಲ್ಪಿಸಬೇಕು. ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು ಇತ್ಯಾದಿಗಳ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಗುತ್ತಿಗೆದಾರರು, ಕಾರ್ಮಿಕರು ಕೆಲಸದ ವೇಳೆ ಕಡ್ಡಾಯ ವಾಗಿ ಮುಖಗವಸು ಧರಿಸತಕ್ಕದ್ದು.
ಎಲ್ಲಾ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಬೇಕು.ಉಪ ಖನಿಜ ಸಾಗಾಣಿಕೆಗೆ ಸಂಬಂಧಪಟ್ಟ ವರಿಂದ ಪಡೆದ ಪರವಾನಗಿ ಪತ್ರ ಹೊಂದಿರತಕ್ಕದ್ದು. ಉಪ ಖನಿಜ ಸಾಗಾಣಿಕೆ ವಾಹನದಲ್ಲಿ ವಾಹನದ ದಾಖಲೆಗಳನ್ನು ಇರಿಸಿಕೊಳ್ಳಬೇಕು, ಚಾಲನಾ ಪರವಾನಗಿ ಹೊಂದಿರುವ ಚಾಲಕ ಮತ್ತು ಒಬ್ಬ ಸಹಾಯಕರಿಗೆ (ಒಟ್ಟು ಇಬ್ಬರು ಮಾತ್ರ) ಸಂಚಾರಕ್ಕೆ ಅವಕಾಶವಿರುತ್ತದೆ. ಮೇಲಿನ ಅಂಶಗಳು ಪಾಲನೆಯಾಗುತ್ತಿರುವ ಬಗ್ಗೆ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ಇವರು ನಿಯಮಿತ ಅವಧಿಯಲ್ಲಿ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು.
ಕೃಷಿ - ತೋಟಗಾರಿಕೆಗೆ ವಿನಾಯಿತಿ
ಜಿಲ್ಲೆಯಲ್ಲಿ ಈ ಕೆಳಕಂಡಂತೆ ಷರತ್ತುಬದ್ದವಾಗಿ ಕಾರ್ಮಿಕರನ್ನು ಬಳಸಿ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಸಂಬಂಧ ಆಗಮಿಸಲು ಮತ್ತು ಹಿಂತಿರುಗಲು ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಕಾರಣಕ್ಕೂ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತರುವಂತಿಲ್ಲ. ಕೃಷಿ, ತೋಟದ ಮಾಲೀಕರು ಕೆಲಸದ ಸ್ಥಳಕ್ಕೆ ಆಗಮಿಸುವ, ಹಿಂತಿರುಗುವ ವೇಳೆಯಲ್ಲಿ ಮತ್ತು ಕಾರ್ಮಿಕರನ್ನು ಕರೆದೊಯ್ಯುವ ವೇಳೆಯಲ್ಲಿ ಜಮೀನಿಗೆ ಸಂಬಂಧಿಸಿದ ಆರ್.ಟಿ.ಸಿ. ಅಥವಾ ಜಮೀನಿಗೆ ಸಂಬಂಧಿಸಿದ ಯಾವುದಾದರೂ ದಾಖಲೆಗಳನ್ನು ಇರಿಸಿಕೊಂಡು ಪರಿಶೀಲನಾ ಸಮಯದಲ್ಲಿ ಹಾಜರುಪಡಿಸಬೇಕು. ಯಾವುದೇ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವಂತಿಲ್ಲ. ಪ್ರಯಾಣಿಕರ ವಾಹನದಲ್ಲಿ ಮಾತ್ರ ಸಂಚರಿಸಬೇಕು.
ಕಾರ್ಮಿಕರ ಸಂಖ್ಯೆಯು ವಾಹನದ ಒಟ್ಟು ಆಸನ ಸಂಖ್ಯೆಯ ಗರಿಷ್ಠ ಶೇ.40 ಮೀರದಂತೆ ಕರೆದೊಯ್ಯಬೇಕು ಹಾಗೂ ವಾಹನದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು ಇತ್ಯಾದಿಗಳ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು.
ಜಿಲ್ಲೆಯ ಸಾರ್ವಜನಿಕ ಹಿತಾಸಕ್ತಿಯಿಂದ ಮೇಲಿನಂತೆ ಅವಕಾಶ ಕಲ್ಪಿಸಲಾಗಿದ್ದು, ಉಲ್ಲಂಘನೆಯು ದಂಡನೀಯವಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಜಾಗದ ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.