ಮಡಿಕೇರಿ, ಏ. 25: ಕೊರೊನಾ ಲಾಕ್‍ಡೌನ್ ಸಂಬಂಧ ಜಿಲ್ಲೆಯಲ್ಲಿ ರುವ ಹಾಲಿ ಕಾಳಜಿ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಬಳಸಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಳುಹಿಸಿಕೊಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಸಂವಾದದಲ್ಲಿ ಸೂಚನೆ ದೊರೆತಿದ್ದು, ಅದರಂತೆ ಜಿಲ್ಲೆಯಲ್ಲಿ ಕಾಫಿ/ ಕೃಷಿ ಚಟುವಟಿಕೆ ಸಂಬಂಧ ಹೊರ ಜಿಲ್ಲೆಯಿಂದ ಆಗಮಿಸಿದ್ದ ಕಾರ್ಮಿಕರನ್ನು ಷರತ್ತು ಬದ್ದವಾಗಿ ಅವರ ಸ್ವ-ಇಚ್ಚೆಯ ಮೇರೆಗೆ ತೋಟದ ಮಾಲೀಕರು / ಗುತ್ತಿಗೆದಾರರು ಕಲ್ಪಿಸುವ ಪ್ರಯಾಣಿಕರ ವಾಹನದ ಮುಖಾಂತರ ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಷರತ್ತುಗಳು *ಕಾರ್ಮಿಕರು ಜಿಲ್ಲೆಯಿಂದ ತೆರಳುವ ಮುನ್ನಾ ಕಾರ್ಮಿಕರು ಕೆಲಸದ ಸ್ಥಳವನ್ನು ಬಿಟ್ಟು ಇತರೆಡೆಗೆ ತೆರಳಿರುವುದಿಲ್ಲ, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಒಳಗಾಗಿರು ವುದಿಲ್ಲ ಮತ್ತು ಸುಳ್ಳು ಮಾಹಿತಿ ನೀಡಿರುವುದಿಲ್ಲ ಎಂದು ನಿಗದಿತ ನಮೂನೆಯಲ್ಲಿ ಮಾಲೀಕರು/ ಗುತ್ತಿಗೆದಾರರು ಘೋಷಣೆಯನ್ನು ಗುರುತಿನ ಚೀಟಿಯ ಪ್ರತಿಯೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ದೃಢೀಕರಣ ಪಡೆದು ತಾಲೂಕು ತಹಶೀಲ್ದಾರ್‍ಗೆ ನೀಡಬೇಕು. ಇದರೊಂದಿಗೆ ಅನುಬಂಧದಂತೆ ಕಾರ್ಮಿಕರ ಒಟ್ಟು ಸಂಖ್ಯೆ, ಹೆಸರು, ಸ್ವಂತ ವಿಳಾಸ ಮತ್ತು ವಾಹನದ ವಿವರಗಳನ್ನು ಸಹ ನೀಡಬೇಕು.

* ತಾಲೂಕು ತಹಶೀಲ್ದಾರರು ಈ ಘೋಷÀಣೆ ಮತ್ತು ಅಗತ್ಯ ದಾಖಲಾತಿಗಳ ಪ್ರತಿಯನ್ನು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಬೇಕು.

* ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈ ದಾಖಲೆಗಳನ್ನು ಆಧಾರವಾಗಿರಿಸಿ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ತಪಾಸಣೆ ನಡೆಸಿ ದೃಢೀಕರಣವನ್ನು ತಹಶೀಲ್ದಾರರಿಗೆ ನೀಡಬೇಕು.

* ಮಾಲೀಕರು/ ಗುತ್ತಿಗೆದಾರರು ಗುರುತಿನ ಚೀಟಿಯ ಪ್ರತಿಯೊಂದಿಗೆ ನೀಡಿದ ಘೋಷಣೆ, ಪ್ರಯಾಣದ ವಾಹನದ ವಿವರ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ನೀಡಿದ ವೈದ್ಯಕೀಯ ದೃಢೀಕರಣದೊಂದಿಗೆ ಪಾಸ್ ವಿತರಣೆ ಸಂಬಂಧ ಉಪವಿಭಾಗಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಬೇಕು.

* ಮೇಲಿನ ದಾಖಲಾತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ನಂತರ ಉಪವಿಭಾಗಾಧಿಕಾರಿ ಯವರು ಪಾಸ್ ವಿತರಿಸಬೇಕು.

* ಯಾವುದೇ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವಂತಿಲ್ಲ. ಪ್ರಯಾಣಿಕರ ವಾಹನದಲ್ಲಿ ಮಾತ್ರ ಸಂಚರಿಸಬೇಕು. ವಾಹನದ ವ್ಯವಸ್ಥೆಯನ್ನು ಸಂಬಂಧಿಸಿದ ತೋಟದ ಮಾಲೀಕರು/ ಗುತ್ತಿಗೆದಾರರು ಮಾಡಿಕೊಳ್ಳಬೇಕು.

* ಕಾರ್ಮಿಕರನ್ನು ಕಡ್ಡಾಯವಾಗಿ ಅವರ ಊರಿನಲ್ಲಿರುವ ಸ್ವಂತ ಮನೆಯ ಬಳಿಗೆ ತಲುಪಿಸಬೇಕು. ದಾರಿ ಮಧ್ಯೆ ಅಥವಾ ಯಾವುದೇ ಬೇರೆ ಸ್ಥಳಗಳಲ್ಲಿ ಇಳಿಸುವಂತಿಲ್ಲ.

* ವಾಹನ ಚಾಲಕ ಮತ್ತು ನಿರ್ವಾಹಕರ ಆರೋಗ್ಯ ತಪಾಸಣೆ ದೃಢೀಕರಣ ಕಡ್ಡಾಯ.

* ಕಾರ್ಮಿಕರ ಸಂಖ್ಯೆಯು ವಾಹನದ ಒಟ್ಟು ಆಸನ ಸಂಖ್ಯೆಯ ಗರಿಷ್ಠ 40% ಮೀರದಂತೆ ಹಾಗೂ ವಾಹನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರೆದೊಯ್ಯಬೇಕು.