ಮಡಿಕೇರಿ, ಏ. 24: ಕೊಡಗು ಜಿಲ್ಲೆಯಲ್ಲಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹದಿನೆಂಟು ಸಾವಿರಕ್ಕೂ ಅಧಿಕ ಮಂದಿ ಹಿರಿಯರು; ಹಿರಿಯ ನಾಗರಿಕರ ಸೇವಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹಿರಿಯರ ಅಗತ್ಯ ಸೇವೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಸೇವಾ ಕೇಂದ್ರದಿಂದ ಮಾಹಿತಿ ಸಂಗ್ರಹಿಸಿ, ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ.
ನಗರದ ಪೆನ್ಷನ್ಲೇನ್ ಮಾರ್ಗದ ಹಳೆಯ ಪೊಲೀಸ್ ವಸತಿಗೃಹದಲ್ಲಿರುವ ಹಿರಿಯ ನಾಗರಿಕರ ಸೇವಾ ಕೇಂದ್ರ ಕಚೇರಿಯಲ್ಲಿ; ದೂರವಾಣಿ ಸಂಖ್ಯೆ 08272-221215ಗೆ ಯಾರೇ ಹಿರಿಯರು ಕರೆ ಮಾಡಿ ತಮ್ಮ ಬೇಡಿಕೆ ಸಲ್ಲಿಸಿದರೂ, ಅಂತವರಿಗೆ ವಿವಿಧ ಇಲಾಖೆ ಮುಖ್ಯಸ್ಥರ ಮಾರ್ಗದರ್ಶನ ದಲ್ಲಿ ಅಗತ್ಯ ನೆರವು ಕಲ್ಪಿಸಲಾಗುತ್ತಿದೆ.
ಈ ಮೂಲಕ ಬಹುತೇಕ ಹಿರಿಯರು ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷ ಚೇತನ ಭತ್ಯೆ, ನಿವೃತ್ತಿ ವೇತನ, ಔಷಧಿ ಕೊರತೆ ಮುಂತಾದ ಬೇಡಿಕೆ ಈಡೇರಿಸಿಕೊಡುವಂತೆ ಸಹಾಯವಾಣಿ ಮೂಲಕ ಕೋರಿಕೆ ಸಲ್ಲಿಸುತ್ತಿದ್ದು, ಅಂತವರಿಗೆ ಸೂಕ್ತ ನೆರವು ಒದಗಿಸಲಾಗುತ್ತಿದೆ ಎಂದು ಇಲಾಖೆ ಉದ್ಯೋಗಿ ನವೀನ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಲಾಕ್ಡೌನ್ ಸಂಬಂಧ ಹಿರಿಯರು ಮನೆಯಿಂದ ಹೊರಬರದಂತೆ ಅವರ ಬೇಕು - ಬೇಡಿಕೆಗಳನ್ನು ಪೂರೈಸಲು ಆಶಾ, ಆರೋಗ್ಯ ಹಾಗೂ ಇನ್ನಿತರ ಕಾರ್ಯಕರ್ತರು ಮತ್ತು ಪೊಲೀಸ್, ಬ್ಯಾಂಕ್ ಸೇವೆ ಇತ್ಯಾದಿ ಕಲ್ಪಿಸಲು ಸಂಬಂಧಪಟ್ಟವರು ತೊಡಗಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ವಿಶೇಷವಾಗಿ ಸಂಧ್ಯಾ ಸುರಕ್ಷಾ ಯೋಜನೆ, ಹಿರಿಯರ ಹಗಲು ವಿಶ್ರಾಂತಿ ಗೃಹ ಇತ್ಯಾದಿಯಲ್ಲಿ ವೃದ್ಧರು ಕೊರೊನಾ ನಿರ್ಬಂಧದಿಂದ ತೊಡಗಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಮನೆ ಬಾಗಿಲಿಗೆ ಅಗತ್ಯ ಸೇವೆಗೆ ವಿವಿಧ ಇಲಾಖೆಗಳ ಉದ್ಯೋಗಿಗಳು ಮುಂದಾಗಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೂಡ ನೆರವು ಬಯಸುವವರಿಗೆ ಅಂಗನವಾಡಿ, ಆರೋಗ್ಯ ಸಹಾಯಕರು, ಗ್ರಾಮಲೆಕ್ಕಿಗರು ಸ್ಪಂದಿಸುವಂತೆ ಜಿಲ್ಲಾಡಳಿತ ಹಾಗೂ ಸರಕಾರ ನಿರ್ದೇಶನ ನೀಡಿದ್ದು, ಎಲ್ಲಿಯೂ ಹಿರಿಯರಿಗೆ ಅಗತ್ಯ ಸೇವೆಯ ಕೊರತೆಯಾಗದಂತೆ ನೋಡಿ ಕೊಳ್ಳುವಂತೆ ಆದೇಶವಿರುವುದಾಗಿ ಕಚೇರಿ ಸಿಬ್ಬಂದಿ ನೆನಪಿಸಿದ್ದಾರೆ.