ಸೋಮವಾರಪೇಟೆ,ಏ.24: ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮವಾರಪೇಟೆ ಬೀದಳ್ಳಿ ಗ್ರಾಮ ನಿವಾಸಿ ಟಿ.ಪಿ. ಶಿವಯ್ಯ (59) ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದು, ಮೃತರ ಸ್ವಗ್ರಾಮವಾದ ಬೀದಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು.ತಾ. 19ರಂದು ಶಿವಯ್ಯ ಅವರಿಗೆ ಹೃದಯ ನೋವು ಕಾಣಿಸಿಕೊಂಡ ಹಿನ್ನೆಲೆ ಮಡಿಕೇರಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿತಾ. 20 ರಂದು ಮೈಸೂರಿನ ಜಯದೇವ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 5.30ಕ್ಕೆ ಇಹಲೋಕ ತ್ಯಜಿಸಿದರು. ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ತಾಲೂಕಿನ ಬೀದಳ್ಳಿ ಗ್ರಾಮದ ಸ್ವಗೃಹಕ್ಕೆ ತರಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಸೇ ರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು.
1984-85ರಲ್ಲಿ ಆರ್‍ಎಫ್‍ಓ ಆಗಿ ಅರಣ್ಯ ಇಲಾಖೆಗೆ ಸೇರ್ಪಡೆಗೊಂಡ ಟಿ.ಪಿ. ಶಿವಯ್ಯ ಅವರು ಪ್ರಸ್ತುತ ಮಡಿಕೇರಿಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರ ಪುತ್ರ ರಚಿತ್ ಯು.ಎಸ್.ಎ.ಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪುತ್ರಿ ಜನ್ಯ ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದಾರೆ. ತಮ್ಮ ತಂದೆಯ ಅಂತಿಮ ದರ್ಶನಕ್ಕೆ ಆಗಮಿಸಲು ಮಕ್ಕಳಿಗೆ ಅಸಾಧ್ಯವಾದ ಪರಿಸ್ಥಿತಿಯ ನಡುವೆ, ಬಂಧುಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ, ಸ್ವಗ್ರಾಮ
(ಮೊದಲ ಪುಟದಿಂದ) ಬೀದಳ್ಳಿಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಮಡಿಕೇರಿಯಿಂದ ಆಗಮಿಸಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ಶಿವಯ್ಯ ಅವರ ನಿಧನಕ್ಕೆ ಸರ್ಕಾರಿ ಗೌರವದ ಸೂಚಕವಾಗಿ ಕುಶಾಲುತೋಪು ಸಿಡಿಸಿದರು. ಅರಣ್ಯ ಇಲಾಖೆಯ ಸಿಸಿಎಫ್ ಹಿರೇಲಾಲ್, ಡಿಸಿಎಫ್ ಪ್ರಭಾಕರನ್, ನಾಗರಹೊಳೆ ಡಿಸಿಎಫ್ ಮಹೇಶ್‍ಕುಮಾರ್, ವೀರಾಜಪೇಟೆ ಡಿಸಿಎಫ್ ಶಿವಶಂಕರ್, ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಅರಣ್ಯ ಇಲಾಖೆಯ ಎಸಿಎಫ್‍ಗಳು, ಎಲ್ಲಾ ರೇಂಜ್ ಸಿಬ್ಬಂದಿಗಳು, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಅಂತಿಮ ದರ್ಶನ ಪಡೆದರು.
ಮೃತ ಶಿವಯ್ಯ ಅವರು ಪತ್ನಿ ಸರಳ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಸಹೋದರ ಟಿ.ಪಿ. ಚಂಗಪ್ಪ ಅವರು ಕಾಫಿ ಮಂಡಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಪ್ರಸ್ತುತ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.