ಕುಶಾಲನಗರ, ಏ. 24: ದೇಶದಲ್ಲಿ ಲಾಕ್‍ಡೌನ್ ನಿಯಮಗಳನ್ನು ಸಂಪೂರ್ಣ ಪಾಲಿಸುವುದರೊಂದಿಗೆ ಕುಶಾಲನಗರ ಸಮೀಪದ ಬೈಲುಕೊಪ್ಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದ ನಾಗರಿಕರು ತಮ್ಮ ಶಿಬಿರವನ್ನು ಕೊರೊನಾ ಮುಕ್ತವಾಗಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಬೈಲುಕೊಪ್ಪ ಕೇಂದ್ರದಿಂದ ಸುಮಾರು ರೂ. 35 ಲಕ್ಷ ಅಧಿಕ ಹಣ ಜೋಡಿಸುವದರೊಂದಿಗೆ ಕರ್ನಾಟಕದ ಇತರೆಡೆಯ ಟಿಬೇಟಿಯನ್ ಶಿಬಿರಗಳಿಂದ ಸಂಗ್ರಹಿತ ಒಟ್ಟು ರೂ. 2 ಕೋಟಿ ನಿಧಿಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿರುವದು ಮತ್ತೊಂದು ವಿಶೇಷ.ಟಿಬೇಟ್ ದೇಶದಿಂದ ತಮ್ಮನ್ನು ನಿರಾಶ್ರಿತರನ್ನಾಗಿ ಓಡಿಸಿದ ಚೈನಾದಲ್ಲಿ ಕೊರೊನಾ ಮಾರಿ ಹಬ್ಬದ ವರದಿ ಹೊರಬೀಳುತ್ತಲೇ ವಿಶ್ವದ ಎಲ್ಲೆಡೆಯಲ್ಲಿರುವ ಟಿಬೇಟಿಯನ್ನರು ತಮ್ಮ ಮತ್ತು ಇತರರ ರಕ್ಷಣೆಗೆ ಕಟಿಬದ್ದರಾಗಿ ನಿಂತಿರುವುದೇ ಈ ಫಲಿತಾಂಶಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವದ 150 ಕ್ಕೂ ಅಧಿಕ ದೇಶಗಳ ಸಂಪರ್ಕ ಹೊಂದಿರುವ ಟಿಬೇಟಿಯನ್ ನಿರಾಶ್ರಿತ ಕೇಂದ್ರಗಳು ಇದರಿಂದ ತಕ್ಷಣ ಎಚ್ಚೆತ್ತುಕೊಂಡು ಜನವರಿ 15 ರಿಂದಲೇ ಮುನ್ನೆಚ್ಚರಿಕೆ ವಹಿಸಿದ್ದಾರೆ. ಯಾವುದೇ ವಿದೇಶಿಗರು ಅಥವಾ ಹೊರಭಾಗದಿಂದ ಶಿಬಿರಕ್ಕೆ ಬಂದು ಹೋಗುವ ಜನರ ಬಗ್ಗೆ ಕಟ್ಟುನಿಟ್ಟಾಗಿ ಕಾರ್ಯಯೋಜನೆ ರೂಪಿಸುವುದರೊಂದಿಗೆ ಸರಕಾರಗಳು ನೀಡಿದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಶಿಬಿರಕ್ಕೆ ತೆರಳುವ ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದ್ದು ಸಾಮೂಹಿಕ ಪ್ರಾರ್ಥನೆ ಕೂಡ ರದ್ದುಗೊಳಿಸುವುದರೊಂದಿಗೆ ಯಾವುದೇ ಸಾಮೂಹಿಕ ಕಾರ್ಯಕ್ರಮಗಳನ್ನು ಕೂಡ ಶಿಬಿರದಲ್ಲಿ ನಡೆಸುವಂತಿಲ್ಲ. ಬೌದ್ಧ ಭಿಕ್ಷುಗಳು ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಎಲ್ಲರ ಆರೋಗ್ಯದ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬೈಲುಕೊಪ್ಪೆ ಲಾಮಾ ಕ್ಯಾಂಪ್‍ನ ಸೆರಾಮೆ ಬೌದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ತಶಿ ಸೆರಿಂಗ್ ರಿಂಪೋಚೆ ಅವರು ತಿಳಿಸಿದ್ದಾರೆ. ಇದರೊಂದಿಗೆ ನೆರೆಯ ಗ್ರಾಮಗಳ ಬಡ ಜನರಿಗೆ ಕೂಡ ಅಗತ್ಯ
(ಮೊದಲ ಪುಟದಿಂದ) ವಸ್ತುಗಳನ್ನು ವಿತರಣೆ ಮಾಡುವ ಕೆಲಸದಲ್ಲಿ ತಮ್ಮ ಬೌದ್ಧ ಭಿಕ್ಷುಗಳು ತೊಡಗಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶಿಬಿರದ ಮುಖ್ಯ ದ್ವಾರವನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಅಗತ್ಯವುಳ್ಳ ಜನರಿಗೆ ಮಾತ್ರ ಪರಿಶೀಲನೆ ನಡೆಸಿ ಆರೋಗ್ಯ ತಪಾಸಣೆ ನಂತರ ಒಳಬಿಡಲಾಗುತ್ತಿದೆ ಎಂದು ರಿಂಪೋಚೆ ತಿಳಿಸಿದ್ದಾರೆ. ಶಾಲೆ, ಅಡುಗೆ ಮನೆ ಮತ್ತಿತರ ಎಲ್ಲಾ ಚಟುವಟಿಕೆಗಳನ್ನು ಮಾರ್ಚ್ 23 ರಿಂದ ಸ್ಥಗಿತಗೊಳಿಸಲಾಗಿದೆ. ಪ್ರತಿಯೊಬ್ಬರೂ ಸರಕಾರದ ಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದ ಇತರೆಡೆಯ ಟಿಬೇಟಿಯನ್ ಶಿಬಿರಗಳಿಂದಲೂ ಸಂಗ್ರಹಿಸಿ ಹಾಗೂ ತಮ್ಮ ಶಿಬಿರದ ಮೂಲಕವೂ ಸೇರಿದಂತೆ ಒಟ್ಟು 2 ಕೋಟಿ ರೂ. ಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ನಿಧಿಗೆ ಹಸ್ತಾಂತರಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಆದಷ್ಟು ಬೇಗನೆ ಈ ಸಂಕಷ್ಟದಿಂದ ಪಾರಾಗಿ ಹೊರಬರಲಿ ಅನ್ನುವ ಪ್ರಾರ್ಥನೆ ಕಳೆದ 4 ವಾರಗಳಿಂದ ನಿರಂತರವಾಗಿ ನಡೆಯುತ್ತಿದೆ. ಶಿಬಿರದ ಪ್ರತಿ ಬೌದ್ಧ ಮಂದಿರಗಳಲ್ಲಿ ಕೇವಲ 4 ಮಂದಿ ನಿತ್ಯ ಪೂಜೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭ ಅವರು ಸಂದೇಶ ನೀಡಿ ತಮಗೆ ಮತ್ತು ಇತರರಿಗಾಗಿ ನಿಸ್ವಾರ್ಥದೊಂದಿಗೆ ಪ್ರತಿಯೊಬ್ಬರೂ ಸರಕಾರದ ಸೂಚನೆಯನ್ನು ಪಾಲಿಸುವುದು ಕರ್ತವ್ಯವಾಗಿದೆ. ನಿಯಮಗಳು ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಕೊರೊನಾ ಮುಕ್ತ ದೇಶವನ್ನಾಗಿಸುವಲ್ಲಿ ಪ್ರತಿಯೊಬ್ಬರೂ ವರ್ತಿಸಬೇಕಾಗಿದೆ ಎಂದರು. ವಿಶೇಷವೆಂದರೆ ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಕೇಂದ್ರದಲ್ಲಿ 15 ಕ್ಕೂ ಅಧಿಕ ಶಿಬಿರಗಳಿದ್ದು 15 ಸಾವಿರಕ್ಕೂ ಅಧಿಕ ಬೌದ್ಧ ಪ್ರಜೆಗಳು ವಾಸವಾಗಿದ್ದು ಈ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ರೀತಿಯ ಕೊರೊನಾ ಸೋಂಕು ಕಂಡುಬಂದಿಲ್ಲ. ಅಲ್ಲದೆ ಭಾರತ ದೇಶದಲ್ಲಿರುವ ಹಲವು ಟಿಬೇಟಿಯನ್ ಕೇಂದ್ರಗಳಲ್ಲಿ ಕೂಡ ಕೊರೊನಾ ಮಾರಿ ಬರದಂತೆ ಎಚ್ಚರವಹಿಸಲಾಗಿದ್ದು ಮುಂದಿನ ಸೂಚನೆ ತನಕ ಇದೇ ರೀತಿಯ ಚಟುವಟಿಕೆಗಳು ಮುಂದುವರೆಯಲಿದೆ ಎಂದು ಸೆರಾಜೆ ವಿಶ್ವವಿದ್ಯಾಲಯದ ಪ್ರಧಾನ ವ್ಯವಸ್ಥಾಪಕರಾದ ಗೆಶೆ ಪಾಲ್ಡೆನ್ ಮಾಹಿತಿ ನೀಡಿದ್ದಾರೆ.
ತಮ್ಮ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಮನೆಮನೆಯಲ್ಲಿ ನೆಲೆಸಿದ್ದು ಕಟ್ಟುನಿಟ್ಟಿನ ಸೂಚನೆಯನ್ನು ಪಾಲಿಸುತ್ತಿದ್ದಾರೆ. ಇದರೊಂದಿಗೆ ತಮ್ಮ ಸೆರಾಜೆ ಸಂಸ್ಥೆಯಿಂದ ಮುಖ್ಯಮಂತ್ರಿಗಳ ನಿಧಿಗೆ ಮತ್ತು ಪ್ರಧಾನಮಂತ್ರಿಗಳ ನಿಧಿಗೆ ಧನಸಹಾಯ ನೀಡಲಾಗಿದೆ.
ಬೈಲುಕೊಪ್ಪ ಶಿಬಿರದ ಸುತ್ತಮುತ್ತಲಿನ ಹಲವು ಗ್ರಾಮಗಳ 3 ಸಾವಿರಕ್ಕೂ ಅಧಿಕ ಬಡ ನಾಗರಿಕರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಗಿದೆ ಎಂದು ಪಾಲ್ಡೆನ್ ತಿಳಿಸಿದ್ದಾರೆ. ತಮ್ಮ ಶಿಬಿರಕ್ಕೆ ಹೊರ ರಾಜ್ಯಗಳಿಂದ ಆಗಮಿಸಿದ 33 ಮಂದಿ ಬೌದ್ಧ ಭಿಕ್ಷುಗಳನ್ನು ಪ್ರತ್ಯೇಕವಾಗಿ ಕ್ವಾರಂಟೇನ್ ನಲ್ಲಿ ಇರಿಸಲಾಗಿದ್ದು ಅವರಿಗೆ ಎಲ್ಲಾ ವ್ಯವಸ್ಥೆಗಳೊಂದಿಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಶಿಬಿರದ ನಾಗರಿಕರು ವಿವಿಧ ಕ್ಯಾಂಪ್‍ಗಳಲ್ಲಿ ನೆಲೆಸಿದ್ದು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತಿದೆ ಎಂದು ಟಿಬೇಟಿಯನ್ ಡಿಕ್ಕಿ ಲಾರ್ಸ್‍ನ ಜಂಟಿ ಕಾರ್ಯದರ್ಶಿ ತೆಂಜಿಂನ್ ಚೋಸನ್ ಮಾಹಿತಿ ನೀಡಿದ್ದಾರೆ. 16 ಗ್ರಾಮಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ನೆಲೆಸಿದ್ದು ಉಳಿದಂತೆ ಎರಡು ಬೌದ್ಧ ಮಂದಿರಗಳು ಮತ್ತು ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಟಿಬೇಟಿಯನ್ ಆಂತರಿಕ ಸರಕಾರ ಮತ್ತು ರಾಜ್ಯ ಸರಕಾರದಿಂದ ಬರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಟಿಬೇಟಿಯನ್ ಶಿಬಿರಗಳಲ್ಲಿರುವ ಆರೋಗ್ಯ ಕೇಂದ್ರಗಳು ಮತ್ತು ರಾಜ್ಯ ಸರಕಾರದ ಸಮುದಾಯ ಆರೋಗ್ಯ ಕೇಂದ್ರಗಳ ಅಧಿಕಾರಿ, ಸಿಬ್ಬಂದಿಗಳು ನಿತ್ಯ ಪ್ರತಿ ಮನೆಮನೆಗೆ ತೆರಳಿ ಕೋವಿಡ್ 19 ಬಗ್ಗೆ ಮುನ್ನೆಚ್ಚರಿಕೆ, ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ. ಮುಂದಿನ ಕೆಲವು ತಿಂಗಳ ಕಾಲ ಹೊರಭಾಗದಿಂದ ಬರುವ ಎಲ್ಲಾ ವ್ಯಕ್ತಿಗಳನ್ನು ಶಿಬಿರಕ್ಕೆ ಸೇರಿಸುವ ಮುನ್ನ ವಿಶೇಷವಾಗಿ ಕ್ವಾರಂಟೇನ್‍ನಲ್ಲಿ ಇರಿಸಲು ಧರ್ಮಶಾಲಾ ಆಂತರಿಕ ಸರಕಾರದಿಂದ ಸೂಚನೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೇರಳ ಮತ್ತು ರಾಜ್ಯದಲ್ಲಿರುವ ಟಿಬೇಟಿಯನ್ ಆರೋಗ್ಯ ಮತ್ತು ಸಲಹೆ ಸೂಚನೆ ನೀಡುವ ನಿಟ್ಟಿನಲ್ಲಿ ಕುಶಾಲನಗರದ ಸಮಾಜ ಸೇವಕರಾದ ಜೆ.ಪಿ.ಅರಸ್ ಅವರನ್ನು ಟಿಬೇಟಿಯನ್ ಆಂತರಿಕ ಸರಕಾರದ ಸಂಪರ್ಕಾಧಿಕಾರಿಯನ್ನಾಗಿ ನೇಮಿಸಿದ್ದು ಬೈಲುಕೊಪ್ಪ ಸೇರಿದಂತೆ ಎಲ್ಲೆಡೆಯ ಶಿಬಿರಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರೊಂದಿಗೆ ಶಿಬಿರಗಳ ಪ್ರಮುಖರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಕೊರೊನಾ ಮುಕ್ತ ಶಿಬಿರವನ್ನಾಗಿಸುವ ನಿಟ್ಟಿನಲ್ಲಿ ಶಿಬಿರಾಧಿಕಾರಿಗಳು ಮತ್ತು ಬೌದ್ಧ ಮಂದಿರದ ಧಾರ್ಮಿಕ ಗುರುಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ ಎಂದು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿರುವ ಜೆಪಿ ಅರಸ್, ದಿನದ 24 ಗಂಟೆಗಳ ಕಾಲ ಹೊರಗಿನಿಂದ ಯಾವುದೇ ವ್ಯಕ್ತಿಗಳು ಬರದಂತೆ ಎಚ್ಚರ ವಹಿಸುತ್ತಿದ್ದಾರೆ.
ತಮ್ಮ ಸಮುದಾಯದ ಜನರ ಆರೋಗ್ಯದೊಂದಿಗೆ ಸುತ್ತಮುತ್ತಲ ಗ್ರಾಮೀಣ ಭಾಗದ ಭಾರತೀಯ ನಾಗರಿಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದರ ಜೊತೆಗೆ ಸಾವಿರಾರು ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದಿದ್ದಾರೆ.