ಗೋಣಿಕೊಪ್ಪಲು, ಏ. 23: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಲಾಕ್ಡೌನ್ ಮುಂದುವರಿಯುತ್ತಿರುವ ಸಂದರ್ಭ ಬಳಕೆ ಮಾಡಿಕೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಣಮೀನು ವ್ಯಾಪಾರಿಗಳು ಒಣಮೀನಿಗೆ ದುಬಾರಿ ಬೆಲೆ ವಿಧಿಸಿ ಗ್ರಾಹಕರಿಗೆ ನೀಡುತ್ತಿದ್ದರು. ನಗರ ವಾಸಿಗಳು ಈ ಬಗ್ಗೆ ಪಂಚಾಯಿತಿಗೆ ಮಾಹಿತಿ ನೀಡಿದ್ದರು.
ಸಾರ್ವಜನಿಕರ ಮಾಹಿತಿ ಆಧರಿಸಿ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಒಣಮೀನಿನ ಮಾರುಕಟ್ಟೆಗೆ ತೆರಳಿ ಪರಿಶೀಲನೆ ನಡೆಸಿದರು. ವ್ಯಾಪಾರ ನಡೆಸುವವರಿಗೆ ಎಚ್ಚರಿಕೆ ನೀಡುವ ಮೂಲಕ ಪಂಚಾಯಿತಿ ವತಿಯಿಂದ ದರ ನಿಗದಿಪಡಿಸಿ ಈ ಹಿಂದೆ ಇದ್ದಂತಹ ಬೆಲೆಗೆ ಒಣಮೀನನ್ನು ಮಾರಾಟ ಮಾಡುವಂತೆ ನಿರ್ದೇಶನ ನೀಡಿದರು. ದುಪ್ಪಟ್ಟು ದರದಲ್ಲಿ ಮಾರಾಟ ಮಾಡಿದ ಬಗ್ಗೆ ದೂರು ಬಂದಲ್ಲಿ ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್, ದ್ಯಾನ್ ಗಣಪತಿ ಮುಂತಾದವರು ಹಾಜರಿದ್ದರು. - ಹೆಚ್.ಕೆ. ಜಗದೀಶ್.