ಮಡಿಕೇರಿ, ಏ. 23: ಕೊರೊನಾ ಭೀತಿಯ ನಡುವೆಯೆ ಕೊಡಗಿನ ಗಡಿ ಸಂಪಾಜೆ ಹಾಗೂ ಸುಂಟಿಕೊಪ್ಪದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು; ರೋಗಿಗಳಿಬ್ಬರೂ ಇದೀಗ ಚೇತರಿಸಿಕೊಂಡಿದ್ದಾರೆ. ಸಂಪಾಜೆಯ ಪುರುಷ ಹಾಗೂ ಸುಂಟಿಕೊಪ್ಪದ ಯುವತಿ ಕೆಲದಿನಗಳ ಹಿಂದೆ ಡೆಂಗ್ಯೂ ಜ್ವರಕ್ಕೆ ಒಳಗಾಗಿದ್ದು; ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ. ಮೋಹನ್ ತಿಳಿಸಿದ್ದಾರೆ.

ಜನವರಿಯಿಂದ ಇಲ್ಲಿಯವರೆಗೆ ಸೋಮವಾರಪೇಟೆ ತಾಲೂಕಿನಲ್ಲಿ 6 ಹಾಗೂ ಮಡಿಕೇರಿ ತಾಲೂಕಿನ 1 ಸೇರಿದಂತೆ ಒಟ್ಟು 7 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಕೂಡಿಗೆ-3, ನಂಜರಾಯಪಟ್ಟಣ-1, ಸುಂಟಿಕೊಪ್ಪ-2, ಸಂಪಾಜೆಯಲ್ಲಿ-1 ಪ್ರಕರಣ ಕಂಡುಬಂದಿದೆ.; ಸಾರ್ವಜನಿಕರು ಕೊರೊನಾ ಮುನ್ನೆಚ್ಚರಿಕೆಯ ಜೊತೆಗೆ ಡೆಂಗ್ಯೂ ಬಗ್ಗೆ ಕೂಡ ಎಚ್ಚರ ವಹಿಸಬೇಕು. ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವದರ ಜೊತೆಗೆ ನೀರು ನಿಲ್ಲದಂತೆ ಗಮನ ಹರಿಸುವದರೊಂದಿಗೆ ಆರೋಗ್ಯ ಇಲಾಖೆಯ ಸೂಚನೆಗಳನ್ನು ತಪ್ಪದೆ ಪಾಲಿಸುವಂತೆ ಜಿಲ್ಲಾಡಳಿತ ಕೋರಿದೆ.