ಕರಿಕೆ, ಏ. 21. ಮೇ 3ರ ವರೆಗೆ ದೇಶದಲ್ಲಿ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸರಕಾರದ ಆದೇಶದಂತೆ ಹಾಗೂ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳ ಪುಂಡಾಟದ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಕೊಡಗಿನ ಕರಿಕೆಯಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಅಂತರ್ರಾಜ್ಯದ ಚೆಂಬೇರಿಯಲ್ಲಿ ರಸ್ತೆ ಬಂದ್ ಮಾಡಿರುವ ಸ್ಥಳಕ್ಕೆ ಇಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭಾಗಮಂಡಲ ಠಾಣಾಧಿಕಾರಿ ಮಹದೇವ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಗಡಿಯಲ್ಲಿ ಅಗತ್ಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ಆತಂಕದ ವಾತಾವರಣವಿಲ್ಲ. ಗ್ರಾಮದ ಜನತೆ ಸರಕಾರದ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ ಎಂದರು. ಯಾವುದಾದರು ಕಾನೂನು ಬಾಹಿರ ಚಟುವಟಿಕೆ, ಕಳ್ಳ ಮಾರ್ಗದಿಂದ ಒಳನುಸುಳುವಿಕೆ ಕಂಡುಬಂದಲ್ಲಿ ನೇರವಾಗಿ ತನ್ನ ಗಮನಕ್ಕೆ ತರುವಂತೆ ಹೇಳಿದರು.