ಸೋಮವಾರಪೇಟೆ, ಏ.20: ಮರಗಸಿ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಬಿದ್ದು ವ್ಯಕ್ತಿ ಯೋರ್ವರು ದುರ್ಮರಣಕ್ಕೀಡಾಗಿ ರುವ ಘಟನೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.

ಕುಂಬೂರು ಗ್ರಾಮದ ಕೆ.ವಿ. ಜತ್ತಪ್ಪ(64) ಎಂಬವರೇ ಸಾವನ್ನಪ್ಪಿದವರು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಿಳಿಗೇರಿ ಗ್ರಾಮದ ಆಲ್ಫೋನ್ಸ್ ಸಿಕ್ವೇರಾ ಎಂಬವರಿಗೆ ಸೇರಿದ ತೋಟದಲ್ಲಿ ಮರಗಸಿ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮೇಲಿನಿಂದ ಕೆಳಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು.

ತಕ್ಷಣ ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಗಾಯಾಳು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದರು. ನಂತರ ಇಲ್ಲಿನ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.