ಮಡಿಕೇರಿ, ಏ. 19: ಕೊರೊನಾ ಸಂಬಂಧ ಸರ್ಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿ ಸಹ ಲಾಕ್‍ಡೌನ್ ಜಾರಿಯಲ್ಲಿದೆ. ಪ್ರಸ್ತುತ ಜಿಲ್ಲೆಗೆ ಅವಶ್ಯವಿರುವ ತರಕಾರಿ, ದಿನಸಿ ಮುಂತಾದ ಅಗತ್ಯ ವಸ್ತುಗಳು ಬಹುಪಾಲು ನೆರೆಯ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದ್ದು, ಈ ಸಾಮಗ್ರಿಗಳನ್ನು ಸಾಗಾಣಿಕೆ ಮಾಡುವ ಸಂಬಂಧ ಅಗತ್ಯ ಸೂಚನೆ / ಮಾರ್ಗಸೂಚಿ ಹೊರಡಿಸಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನ / ಜನರು ಅಂತರ್ ಜಿಲ್ಲಾ ಸಂಚಾರ ಮಾಡುವುದು ಸೂಕ್ತವಾಗಿರದ ಕಾರಣ ಅಗತ್ಯ ವಸ್ತುಗಳ ಪೂರೈಕೆ ಸಂಬಂಧ ಮೇಲ್ವಿಚಾರಣೆಗಾಗಿ ತಾಲೂಕುವಾರು ತಹಶೀಲ್ದಾರ್ ನೇತೃತ್ವದಲ್ಲಿ ಆರಕ್ಷಕ ಉಪ ಅಧೀಕ್ಷಕರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು / ಮುಖ್ಯಾಧಿಕಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಮಾರ್ಗಸೂಚಿಯ ವಿವರ

* ಒಂದೇ ಗ್ರಾಮ ಅಥವಾ ಪ್ರದೇಶಕ್ಕೆ ತರುವ ಸಾಮಗ್ರಿಗಳನ್ನು ಹಲವು ವಾಹನಗಳ ಬದಲಾಗಿ ಒಂದೇ ವಾಹನ (ಒಂದು ದೊಡ್ಡ ವಾಹನ)ದ ಮೂಲಕ ತರಲು ಸಾಧ್ಯವಿದ್ದಲ್ಲಿ ಈ ಬಗ್ಗೆ ವ್ಯಾಪಾರಿಗಳು / ವರ್ತಕರು ಕ್ರಮವಹಿಸಬೇಕು.

* ಒಂದೇ ಗ್ರಾಮ ಅಥವಾ ಪ್ರದೇಶಕ್ಕೆ ತರುವ ಸಾಮಗ್ರಿಗಳನ್ನು ಹಲವು ವಾಹನಗಳ ಬದಲಾಗಿ ಒಂದೇ ವಾಹನ (ಒಂದು ದೊಡ್ಡ ವಾಹನ)ದ ಮೂಲಕ ತರಲು ಸಾಧ್ಯವಿದ್ದಲ್ಲಿ ಈ ಬಗ್ಗೆ ವ್ಯಾಪಾರಿಗಳಿಗೆ ಮಾಹಿತಿ ನೀಡಿ, ಅಗತ್ಯ ಮಾರ್ಗದರ್ಶನ ನೀಡುವುದು. ಮತ್ತು ಅಂತರ್ ಜಿಲ್ಲಾ ಸಂಚಾರ ಮಾಡುತ್ತಿರುವ ವಾಹನಗಳ ಟ್ರಿಪ್ ಶೀಟ್ ಪಡೆದು ಈ ಬಗ್ಗೆ ರಿಜಿಸ್ಟರ್ ನಿರ್ವಹಿಸುವುದು.

* ಅಗತ್ಯ ವಸ್ತುಗಳ ಪೂರೈಕೆ ವಾಹನದಲ್ಲಿ ಚಾಲಕರು ಸೇರಿದಂತೆ ಇಬ್ಬರು ಮಾತ್ರ ಸಂಚರಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಮತ್ತು ಸುರಕ್ಷತೆಯ ಹಿತದೃಷ್ಠಿಯಿಂದ ಸುರಕ್ಷತಾ ಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು.

* ತರಕಾರಿ, ಹಣ್ಣುಹಂಪಲು, ದಿನಸಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳನ್ನು ಹೊರ ಜಿಲ್ಲೆಯಿಂದ ಖರೀದಿಸಿ ಜಿಲ್ಲೆಗೆ ಆಗಮಿಸುವ ಸಂದರ್ಭ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು 1968ರ ನಿಯಮ 74-ಎ(1)ರಂತೆ ನಮೂನೆ (ಖಿಡಿiಠಿ Sheeಣ) ಯಲ್ಲಿ ವಿವರಗಳನ್ನು ನಮೂದಿಸಿ ಮೂರು ಪ್ರತಿಯಲ್ಲಿ ಸಿದ್ದವಾಗಿರಿಸಿಕೊಳ್ಳಬೇಕು. ಮತ್ತು ಈ ಜಿಲ್ಲೆಗೆ ಆಗಮಿಸುವ ಸಮಯದಲ್ಲಿ ಒಂದು ಪ್ರತಿಯನ್ನು ಜಿಲ್ಲೆಯ ಚೆಕ್ಪೋಸ್ಟ್ ಸಿಬ್ಬಂದಿಗೆ, ಮತ್ತೊಂದು ಪ್ರತಿಯನ್ನು ತಾಲೂಕು ಸಮಿತಿಗೆ ನೀಡಬೇಕು. ಉಳಿಕೆ ಪ್ರತಿಯನ್ನು ವರ್ತಕರು / ವಿತರಕರು ತಾವೇ ಇರಿಸಿಕೊಳ್ಳಬೇಕು.

* ನೆರೆಯ ಜಿಲ್ಲೆಗಳ ರೈತರು ತಾವೇ ಬೆಳೆದಿರುವ ಸೊಪ್ಪು, ತರಕಾರಿ, ಹಣ್ಣುಹಂಪಲು ಮುಂತಾದವುಗಳನ್ನು ಈ ಜಿಲ್ಲೆಯಲ್ಲಿ ಮಾರಾಟ ಮಾಡುವದಿದ್ದಲ್ಲಿ, ಈ ಬಗ್ಗೆ ಮೇಲ್ಕಾಣಿಸಿದ ತಾಲೂಕು ಸಮಿತಿಯಲ್ಲಿ ನೋಂದಾಯಿಸಿ, ಅನುಮತಿ ಪಡೆದುಕೊಳ್ಳಬೇಕು.

* ಅಗತ್ಯ ವಸ್ತುಗಳ ಪೂರೈಕೆ ಮಾಡುವ ವರ್ತಕರು / ವಿತರಕರು, ವ್ಯಾಪಾರಿಗಳು ಆರೋಗ್ಯ ಇಲಾಖೆ ವತಿಯಿಂದ ತೆರೆಯಲಾಗಿರುವ ವೈದ್ಯಕೀಯ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ವಾರಕ್ಕೊಮ್ಮೆ ಕಡ್ಡಾಯವಾಗಿ ತಪಾಸಣೆ (Sಛಿಡಿeeಟಿiಟಿg) ಮಾಡಿಸಿಕೊಂಡು ದೃಢೀಕರಣ ಪಡೆದುಕೊಳ್ಳಬೇಕು.

ಈ ಆದೇಶವು ತಾ.22ರಿಂದ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.