ಮಡಿಕೇರಿ, ಏ. 19: ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಲಂಗುಲಗಾಮಿಲ್ಲದೆ ಮಧ್ಯವರ್ತಿಗಳ ಹಾವಳಿಯೊಂದಿಗೆ; ಗ್ರಾಹಕರಿಗೆ ಮನಬಂದಂತೆ ಹಣ್ಣು - ತರಕಾರಿಗಳ ಮಾರಾಟ ನಡೆದರೆ; ಇವನ್ನು ಬೆಳೆಯುವ ರೈತ ಮಾತ್ರ ತೀರಾ ನಷ್ಟ ಅನುಭವಿಸಬೇಕಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಜಿಲ್ಲೆಯ ಮೂರು ರೈತ ಉತ್ಪನ್ನ ಸಹಕಾರ ಸಂಸ್ಥೆಗಳ ಕಾಳಜಿ ನಡುವೆ; ಜಿಲ್ಲಾಡಳಿತ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಚೇಂಬರ್ ಆಫ್ ಕಾಮರ್ಸ್ ಹಾಗೂ ತೋಟಗಾರಿಕಾ ಇಲಾಖೆ ಮತ್ತು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಬಹಳಷ್ಟು ಉತ್ಪನ್ನಗಳು ಅಗ್ಗದಲ್ಲಿ ಗ್ರಾಹಕರಿಗೆ ಲಭಿಸುವಂತಾಗಿದೆ. ಇಲ್ಲಿ ರೈತರು, ವರ್ತಕರು, ಗ್ರಾಹಕರಿಗೆ ಒಂದು ರೀತಿಯಲ್ಲಿ ನ್ಯಾಯಬೆಲೆಗೆ ವಹಿವಾಟು ದೊರಕುವಂತಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಕಾರ ವಿಧಿಸಿರುವ ನಿರ್ಬಂಧಗಳ ನಡುವೆ; ತೋಟಗಾರಿಕಾ ಇಲಾಖೆ ಯಿಂದ ರೈತರು ಬೆಳೆದಿರುವ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳ ಮಾರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಸರಕಾರದ ನಿರ್ದೇಶನವಿದೆ. ಆ ದಿಸೆಯಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಹೆಚ್. ಶಶಿಧರ್ ಬಳಿ ಮಾಹಿತಿ ಬಯಸಿದಾಗ; ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು; ಕೊಡಗಿ ನಂತಹ ಪುಟ್ಟ ಜಿಲ್ಲೆಯಲ್ಲಿ ರೈತರು ಒಂದಿಷ್ಟು ಪ್ರಮಾಣದಲ್ಲಿ ಅಲ್ಲಲ್ಲಿ ಬೆಳೆಯುತ್ತಿರುವ ಫಸಲುಗಳ ಖರೀದಿ ಹಾಗೂ ಮಾರಾಟಕ್ಕೆ ಅಗತ್ಯ ಸಹಕಾರವನ್ನು ಇಲಾಖೆಯು ನೀಡುತ್ತಿರುವದಾಗಿ ವಿವರಿಸಿದರು. ಮುಖ್ಯವಾಗಿ ರೈತರು ಬೆಳೆಯುವ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ನ್ಯಾಯಬೆಲೆಗೆ ವಿತರಿಸಲು ಸಹಕಾರ ಸಂಸ್ಥೆಗಳಿಗೆ ಇಲಾಖೆಯು ಅಗತ್ಯ ವಾಹನ ರಹದಾರಿ ಇತ್ಯಾದಿ ಒದಗಿಸಲು; ಪೊಲೀಸ್ ಇಲಾಖೆ ಯೊಂದಿಗೆ ಸಂಪರ್ಕವಿತ್ತು. ಅಗತ್ಯ ನೆರವು ನೀಡುತ್ತಿರುವದಾಗಿ ವಿವರಿಸಿದರು.
ಅಲ್ಲದೆ ಉತ್ತರ ಕೊಡಗಿನ ಶನಿವಾರಸಂತೆ-ಕೊಡ್ಲಿಪೇಟೆ ಮುಂತಾದೆಡೆಗಳಲ್ಲಿ ಬೆಳೆಯುವ ಹಸಿ ಮೆಣಸಿನ ಕಾಯಿ, ಸುವರ್ಣ ಗೆಡ್ಡೆ; ಇತರೆಡೆಗಳಲ್ಲಿ ನೇಂದ್ರ ಬಾಳೆ ಇತ್ಯಾದಿಯನ್ನು ಹೊರ ಜಿಲ್ಲೆಯ ಮಾರುಕಟ್ಟೆಗಳಿಗೆ ಸಾಗಿಸಲು ಗಡಿಗಳಲ್ಲಿ ಸಮಸ್ಯೆಯಾಗದಂತೆ ಪೊಲೀಸ ರೊಂದಿಗೆ ವ್ಯವಹರಿಸಿ ಪರವಾನಗಿ ಪತ್ರ ಕೂಡ
(ಮೊದಲ ಪುಟದಿಂದ) ಕೊಡಿಸಲಾಗುತ್ತಿದೆ ಎಂದರು.
ಅಗ್ಗದಲ್ಲಿ ಪೂರೈಕೆ : ಕೊಡಗಿನಲ್ಲಿ ಗ್ರಾಮೀಣ ಭಾಗದ ಜನತೆಗೆ ಅಗ್ಗದಲ್ಲಿ ತರಕಾರಿ ಇತ್ಯಾದಿಯನ್ನು ಜಿಲ್ಲೆಯ ಮೂರು ಕಡೆ ಸಹಕಾರ ಸಂಘಗಳ ಮೂಲಕ ಪೂರೈಸಲು ಕ್ರಮಕೈಗೊಂಡಿದ್ದು; ಉತ್ತಮ ಸ್ಪಂದನ ಲಭಿಸುತ್ತಿದೆ ಎಂದು ಶಶಿಧರ್ ನೆನಪಿಸಿದರು. ಭಾಗಮಂಡಲ ಶ್ರೀ ಭಗಂಡೇಶ್ವರ ರೈತ ಉತ್ಪನ್ನ ತೋಟಗಾರಿಕ ಬೆಳೆಗಳ ಸಹಕಾರ ಸಂಘ ಹಾಗೂ ಸೋಮವಾರಪೇಟೆಯ ಪುಷ್ಪಗಿರಿ ರೈತರ ತೋಟಗಾರಿಕಾ ಉತ್ಪನ್ನ ಸಹಕಾರ ಸಂಘ ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಆಶ್ರಯ ಮುಖಾಂತರ; ಆಯಾ ಭಾಗದ ಫಸಲುಗಳನ್ನು ಸಂಗ್ರಹಿಸಿ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಅಗ್ಗದ ಬೆಲೆಗೆ ಗ್ರಾಹಕರಿಗೆ ಒದಗಿಸಲು ಪ್ರಯತ್ನ ನಡೆದಿದೆ ಎಂದು ವಿವರಿಸಿದರು.
ಪ್ರಮುಖರ ಪ್ರತಿಕ್ರಿಯೆ : ಭಗಂಡೇಶ್ವರ ಸಂಸ್ಥೆಯ ಪ್ರಮುಖರಾದ ಕೋಡಿ ಪೊನ್ನಪ್ಪ ಅವರನ್ನು ಸಂಪರ್ಕಿಸಿದಾಗ; ಗ್ರಾಮೀಣ ರೈತರು ಬೆಳೆದಿರುವ ತರಕಾರಿಗಳನ್ನು ಅಲ್ಲಲ್ಲಿ ತಂದು ಮಾರಾಟಗೊಳಿಸುತ್ತಿದ್ದು; ಉತ್ತಮ ಸ್ಪಂದನ ದೊರಕುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರಿಕೆ - ಭಾಗಮಂಡಲ ವ್ಯಾಪ್ತಿಯ ಜನತೆಗೆ ಈಗಾಗಲೇ ತರಕಾರಿ ಪೂರೈಕೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಂತೆಯೇ ಪುಷ್ಪಗಿರಿ ಸಂಸ್ಥೆಯ ಪಿ.ಎಸ್. ರಮೇಶ್ ಪ್ರತಿಕ್ರಿಯಿಸಿ; ರೈತರ ತರಕಾರಿಗಳಿಗೆ ಗ್ರಾಹಕರು ತುಂಬಾ ಬೇಡಿಕೆಯೊಂದಿಗೆ ಖರೀದಿಸುತ್ತಿದ್ದು; ಈ ಪ್ರಯತ್ನವನ್ನು ಸಾಧ್ಯವಾದಷ್ಟು ವಿಸ್ತರಿಸಲು ಚಿಂತನೆ ನಡೆದಿದೆ ಎಂದರು. ಈ ಸಲುವಾಗಿ ಕುಶಾಲನಗರ ಎಪಿಎಂಸಿ ಹಾಗೂ ಸೋಮವಾರಪೇಟೆ ಮಾರುಕಟ್ಟೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಏಪ್ರಿಲ್ 20ರ ಬಳಿಕ ತರಕಾರಿಯೊಂದಿಗೆ ರೈತ ಉತ್ಪನ್ನಗಳ ಮಾರಾಟಕ್ಕೆ ನಿರ್ಬಂಧ ಸಡಿಲವಾಗಲಿದ್ದು; ವ್ಯಾಪಾರ ಹಾಗೂ ಫಸಲು ಖರೀದಿಯನ್ನು ವಿವಿಧ ಸಂತೆಗಳಿಗೆ ವಿಸ್ತರಿಸಲು ಪ್ರಯತ್ನಿಸಲಾಗುವದು ಎಂದು ಭಗಂಡೇಶ್ವರ ಸಂಸ್ಥೆಯ ಕೋಡಿ ಪೊನ್ನಪ್ಪ ನುಡಿದರಲ್ಲದೆ; ಸಂಸ್ಥೆಯ ಮೂಲಕ ಬೆಳೆಯುವ ತರಕಾರಿಗಳನ್ನು ರೈತರು ಸಾವಯವ ಗೊಬ್ಬರ ಮಾತ್ರದಿಂದ ಉತ್ಪಾದಿಸುತ್ತಿದ್ದು; ಆರೋಗ್ಯವರ್ಧಕವೆಂದು ನೆನಪಿಸಿದರು. ತೋಟಗಾರಿಕಾ ಇಲಾಖೆಯ ಸಹಕಾರದಿಂದ ಹೆಚ್ಚು ಹೆಚ್ಚು ಖರೀದಿ ಮತ್ತು ಮಾರಾಟಕ್ಕೆ ಯೋಜನೆ ರೂಪಿಸಲಾಗುವದು ಎಂದು ಅವರು ಅಭಿಪ್ರಾಯಪಟ್ಟರು.
3ರಿಂದ 5 ಟನ್ ಪೂರೈಕೆ : ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕಾ ಇಲಾಖೆಯ ಸಹಕಾರದಿಂದ ಪುತ್ತರಿ ರೈತ ಉತ್ಪಾದಕರ ಸಹಕಾರ ಸಂಘವು; ಪ್ರಸ್ತುತ ಗೋಣಿಕೊಪ್ಪಲು ಆರ್‍ಎಂಸಿ ಮಾರುಕಟ್ಟೆಯಲ್ಲಿ ವಾರಕ್ಕೆ 3 ರಿಂದ 5 ಟನ್‍ಗಳಷ್ಟು ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಪೂರೈಸುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕರಾದ ಹೆಚ್.ಆರ್. ಪೊನ್ನಣ್ಣ ಮಾಹಿತಿ ನೀಡಿದರು. ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಕೆ.ಪಿ. ಸುಬ್ಬಯ್ಯ ಹಾಗೂ ಆಡಳಿತ ಮಂಡಳಿ ಪ್ರಮುಖರ ಸಹಕಾರದಿಂದ ಉತ್ತಮ ವಹಿವಾಟು ಸಾಗುತ್ತಿದೆ ಎಂದರು.
ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಈ ಮೂರು ಸಂಸ್ಥೆಗಳಿಗೆ ಇಲಾಖೆಯ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದೊಂದಿಗೆ; ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಮಾರುಕಟ್ಟೆ ಒದಗಿಸಲು ಅವಕಾಶವಿದೆ ಎಂದು ಆಯಾ ಪ್ರಮುಖರು ಮಾಹಿತಿ ನೀಡಿದ್ದಾರೆ.