ಸಿದ್ದಾಪುರ, ಏ. 19: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ. ನೆಲ್ಲಿಹುದಿಕೇರಿ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಶನಿವಾರದಂದು ಕೈಗೊಳ್ಳಲಾಗಿತ್ತು. ಆದರೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಮರಿ ಆನೆಗಳು ಸೇರಿದಂತೆ 22ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟದಿಂದ ಕದಲದೆ ತೋಟದಲ್ಲೇ ಸುತ್ತಾಡುತ್ತಿದ್ದವು. ಇದು ಅರಣ್ಯ ಇಲಾಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರದಂದು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ 15 ಮಂದಿ ಸಿಬ್ಬಂದಿ ಸೇರಿ ಬೆಳಗ್ಗಿನಿಂದಲೇ ಬಿಸಿಲನ್ನೂ ಲೆಕ್ಕಿಸದೆ ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ನಡೆಸಿದರು. ನೆಲ್ಲಿಹುದಿಕೇರಿ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ರಾತ್ರಿ ಸಮಯದಲ್ಲಿ ದಾಂಧಲೆ ನಡೆಸುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು.

ಕಾಡಾನೆಗಳು ಕಾಡಿಗೆ ತೆರಳಲು ಹಿಂದೇಟು ಹಾಕಿದರೂ ಛಲಬಿಡದ ಅರಣ್ಯಾಧಿಕಾರಿಗಳು ಭಾನುವಾರದಂದು ಕಾರ್ಯಾಚರಣೆ ನಡೆಸಿ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟಿದರು. ಈ ಸಂದರ್ಭ 2 ಸಲಗಗಳು, 4 ಮರಿಯಾನೆಗಳು ಸೇರಿದಂತೆ 24 ಕಾಡಾನೆಗಳು ಕಂಡುಬಂದವು ಎಂದು ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ತಿಳಿಸಿದ್ದಾರೆ. ಕಾಡಾನೆಗಳ ಹಿಂಡುಗಳನ್ನು ಮಾಲ್ದಾರೆ ಮೀಸಲು ಅರಣ್ಯಕ್ಕೆ ಓಡಿಸಲಾಯಿತು.

ಕಾಫಿ ತೋಟಗಳಲ್ಲಿ ಹಲಸಿನ ಕಾಯಿಗಳು ಹೆಚ್ಚಾಗಿದ್ದು, ಅರಣ್ಯದಲ್ಲಿ ಆಹಾರಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಆಹಾರವನ್ನು ಅರಿಸಿಕೊಂಡು ತೋಟಕ್ಕೆ ನುಸುಳುತ್ತಿವೆ. ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿಗಳನ್ನು ಹಾಕಿದ್ದು ಇದರಿಂದಾಗಿ ತೋಟಗಳನ್ನು ಬಿಟ್ಟು ತೆರಳಲು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.

ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯ ಭೀತರಾಗಿದ್ದಾರೆ. ಸರಕಾರವು ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚರಣ್, ರವಿಕಿರಣ್, ಆಶಿಕ್, ಜಗದೀಶ್, ಅಪ್ಪಸ್ವಾಮಿ, ಆಲ್ಬರ್ಟ್, ವಿಜಯ್, ತಿಲಕ್ ಪಾಲ್ಗೊಂಡಿದ್ದರು.

ವರದಿ: ವಾಸು