ಸೋಮವಾರಪೇಟೆ, ಮಾ. 18: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ಆತಂಕ ತಾಲೂಕಿನ ಗ್ರಾಮೀಣ ಭಾಗ ದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದ ಸುಗ್ಗಿ ಉತ್ಸವಗಳಿಗೂ ತಟ್ಟಿದೆ. ಪರಿಣಾಮ ಹಬ್ಬದ ಸಡಗರಕ್ಕೆ ಕಾರಣವಾಗುತ್ತಿದ್ದ ಸುಗ್ಗಿ ಉತ್ಸವಗಳು ಪ್ರಸಕ್ತ ವರ್ಷ ರದ್ದುಗೊಳ್ಳುತ್ತಿವೆ. ಲಾಕ್ ಡೌನ್ ನಿಂದಾಗಿ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನಲ್ಲಿ ಅನೂಚಾ ನವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಸಂಭ್ರಮದ ಸುಗ್ಗಿ ಉತ್ಸವಗಳು ಈ ಬಾರಿ ರದ್ದುಗೊಂಡಿದ್ದು, ಗ್ರಾಮೀಣ ಜನರಲ್ಲಿ ನಿರಾಸೆ ಮೂಡಿಸಿದೆ.

ಪುಷ್ಪಗಿರಿ ಬೆಟ್ಟಶ್ರೇಣಿಯ ಮಲೆನಾಡಿನ ಭಾಗದಲ್ಲಿ ನಡೆಯುತ್ತಿದ್ದ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವಗಳಾದ ಕೂತಿ ನಾಡು ಸುಗ್ಗಿ (ನಗರಳ್ಳಿ), ತೋಳುನಾಡು ಸುಗ್ಗಿ, ಯಡೂರು, ಹಾನಗಲ್ ಶೆಟ್ಟಳ್ಳಿ, ಕುಮಾರಳ್ಳಿ, ಚೌಡ್ಲು ಸಕಲೇಶಪುರ ತಾಲೂಕಿನ ಗೊದ್ದು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸುಗ್ಗಿ ಉತ್ಸವಗಳು ರದ್ದು ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನ ಮಂದಿ ಗ್ರಾಮ ದೇವತೆಯ ಪೂಜೆಯನ್ನು ಸುಗ್ಗಿಯಾಗಿ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿರುವ ಲಾಕ್‍ಡೌನ್ ನಿಂದ ಸಂಭ್ರಮಗಳು ಮರೆಯಾಗಿವೆ. ಪ್ರತಿ ವರ್ಷ ಮಾರ್ಚ್ ಕೊನೆ ಮತ್ತು ಏಪ್ರಿಲ್ ತಿಂಗಳಿನಲ್ಲಿ ಸುಗ್ಗಿ ಹಬ್ಬ ಆಚರಣೆಗೊಳ್ಳುತ್ತಿದ್ದು, ಹೆಣ್ಣುಮಕ್ಕಳು ತವರಿಗೆ ಆಗಮಿಸಿ, ಕುಟುಂಬಸ್ಥರು-ಬಂಧುಮಿತ್ರರೊಂದಿಗೆ ಕಲೆತು ಸಂಭ್ರಮ ಪಡುತ್ತಿದ್ದರು.

ಇದರೊಂದಿಗೆ ಮದುವೆ ಕಾಣಿಕೆ ಒಪ್ಪಿಸುವದು, ಗ್ರಾಮದ ಬಂದೂಕುಗಳ ಪೂಜೆ, ಸುಗ್ಗಿ ಕುಣಿತ, ವಾಲಗ ಕುಣಿತ ಸೇರಿದಂತೆ ಸುಗ್ಗಿಯ ಸಾಂಪ್ರದಾಯಿಕ ಆಚರಣೆಗಳು ವಾರದ ಕಾಲ ನಡೆಯುತ್ತಿದ್ದವು. ಆದರೆ ಈ ವರ್ಷ ಸಂಭ್ರಮದ ಸುಗ್ಗಿ ಮಾಯವಾಗಿದ್ದು, ಗ್ರಾಮದ ದೇವತೆಗೆ ಸಾಂಪ್ರದಾಯಿಕ ಪೂಜೆ ನಡೆಸಲು ತೀರ್ಮಾನಿಸಲಾಗಿದೆ. ತಾ. 13ರ ಸೋಮವಾರ ನಡೆಯ ಬೇಕಾಗಿದ್ದ ಕೂತಿ ನಾಡು ಶ್ರೀ ಸಬ್ಬಮ್ಮ ದೇವರ ಉತ್ಸವ ಕೂಡ ರದ್ದಾಗಿದ್ದು, ತೋಳೂರುಶೆಟ್ಟಳ್ಳಿ ಗ್ರಾಮದ ಉತ್ಸವವನ್ನು ಪ್ರಸಕ್ತ ವರ್ಷ ರದ್ದು ಗೊಳಿಸಲಾಗಿದೆ.