ಕರಿಕೆ, ಏ. 15: ದೇಶಾದ್ಯಂತ ಮಾರಕ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದು, ಬಹುಪಾಲು ಜನತೆ ಅದನ್ನು ಪಾಲಿಸುತ್ತಿದ್ದಾರೆ. ಪೆÇಲೀಸ್, ಆರೋಗ್ಯ ಇಲಾಖೆ ಹಗಲು-ರಾತ್ರಿ ಕಟ್ಟೆಚ್ಚರ ವಹಿಸಿ ಮಾರಕ ರೋಗವನ್ನು ಹತೋಟಿಗೆ ತರಲು ಯತ್ನಿಸುತ್ತಿದ್ದರೆ ಇತ್ತ ಗಡಿಗ್ರಾಮವಾದ ಕರಿಕೆಯಲ್ಲಿ ಮಾತ್ರ ಕೆಲ ಮಂದಿ ಕಳ್ಳ ಮಾರ್ಗವಾಗಿ ರಾತೋರಾತ್ರಿ ಕೇರಳಕ್ಕೆ ತಮ್ಮ ಬೆಳೆ ಮಾರಾಟ ಹಾಗೂ ಹೊಗೆಸೊಪ್ಪು (ತಂಬಾಕು), ಒಣಮೀನು, ತರಕಾರಿ, ಕೋಳಿಗಳನ್ನು ತಂದು ಗ್ರಾಮದೊಳಗೆ ಪೆÇಲೀಸರ ಕಣ್ತಪ್ಪಿಸಿ ಮಾರಾಟ ಮಾಡುತ್ತಿದ್ದು ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಾಗಿದೆ. ಅಂತರರಾಜ್ಯ ಪ್ರಮುಖ ರಸ್ತೆ ಯನ್ನು ಮಣ್ಣು ಸುರಿದು ಬಂದ್ ಮಾಡಿದ್ದು ಪೆÇಲೀಸ್ ಕಾವಲು ಹಾಕಲಾಗಿದೆ. ಕೇರಳದಲ್ಲಿ ವಾಸವಿದ್ದು ಕರಿಕೆಯಲ್ಲಿ ಅಂಗಡಿ ನಡೆಸುತ್ತಿರುವ ವ್ಯಾಪಾರಿಯೊಬ್ಬ ಗ್ರಾಮ ಪಂಚಾಯಿತಿ ನೊಟೀಸ್ ನೀಡಿದ್ದರೂ ಕೂಡ ಅಡ್ಡ ರಸ್ತೆ, ಕಾಲುದಾರಿ ಮೂಲಕ ತಲೆ ಹೊರೆಯಲ್ಲಿ ಕೇರಳದಿಂದ ವಸ್ತುಗಳನ್ನು ತಂದು ಲಾಭಕ್ಕಾಗಿ ಮಾರಾಟ ಮಾಡಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಿದೆ. - ಸುಧೀರ್.