ದೇಶದಲ್ಲಿ ಅಗತ್ಯ ವಸ್ತುಗಳು ಸಾಕಷ್ಟಿದೆ
ನವದೆಹಲಿ, ಏ. 14: ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಅವರು, ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿವೆ ಎಂಬುದನ್ನು ದೇಶದ ಗೃಹ ಸಚಿವನಾಗಿ ಜನತೆಗೆ ಭರವಸೆ ನೀಡುತ್ತಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಚಿಂತೆಪಡುವ ಅಗತ್ಯವಿಲ್ಲ. ಅಲ್ಲದೆ, ಶ್ರೀಮಂತರು ಬಡವರಿಗೆ ಸಹಾಯ ಮಾಡುವಂತೆ ಇದೇ ವೇಳೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ. ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರಗಳ ಪರಿಶ್ರಮವನ್ನೂ ಅಮಿತ್ ಶಾ ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯವಾದದ್ದು. ಪ್ರಸ್ತುತ ಘೋಷಣೆಯಾಗಿರುವ ಲಾಕ್ಡೌನ್ನ್ನು ಪ್ರತಿಯೊಬ್ಬ ಪ್ರಜೆ ಕೂಡ ಪಾಲನೆ ಮಾಡುವಂತೆ ಮಾಡಲು ನಾವು ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಕಾರ್ಯಕರ್ತೆ ಮೇಲೆ ಹಲ್ಲೆ
ದಾವಣಗೆರೆ, ಏ. 14: ಮಾರಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಅಂಗನವಾಡಿ ಕಾರ್ಯಕರ್ತರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬೀದರಹಳ್ಳಿ ತಾಂಡಾದಲ್ಲಿ ನಡೆದಿದೆ. ಬೆಂಗಳೂರಿನಿಂದ ಬೀದರಹಳ್ಳಿ ತಾಂಡಾಗೆ ಮರಳಿದ ಎಂಟು ಯುವಕರು ಮನೆಯೊಳಗೇ ಕ್ವಾರಂಟೈನ್ನಲ್ಲಿರಬೇಕು ಬೀದಿಗಳಲ್ಲಿ ಸಂಚರಿಸ ಬಾರದು ಎಂದು ಶಶಿಕಲಾ ಬಾಯಿ ಎಂಬ ಅಂಗನವಾಡಿ ಕಾರ್ಯಕರ್ತೆ ಸೂಚಿಸಿದ್ದಾರೆ. ಈ ಯುವಕರು ಬೆಂಗಳೂರು ನಗರದ ಸೋಂಕು ಪೀಡಿತ ಪ್ರದೇಶದವರಾಗಿರಬಹುದು ಎಂದು ಅವರು ಹೇಳಿದ್ದಾರೆ. ಆದರೆ ಯುವಕರು ಆಕೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಹಲ್ಲೆಗೊಳಗಾದ ಶಶಿಕಲಾ ಅವರನ್ನು ಸವಳಂಗ ಸಿಹೆಚ್ಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೊನ್ನಾಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
28 ದಿನ ಪಾಸಿಟಿವ್ ಪ್ರಕರಣ ಇರಬಾರದು
ನವದೆಹಲಿ, ಏ. 14: ಕೊರೊನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು, ಒಂದು ಪ್ರದೇಶದಲ್ಲಿ 28 ದಿನಗಳವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದಿದ್ದರೆ ಮಾತ್ರ ಅದನ್ನು ಕೊರೊನಾ ಮುಕ್ತ ಪ್ರದೇಶ ಎಂದು ಘೋಷಿಸಲಾಗುವುದು ಎಂದರು. ದೇಶದಲ್ಲಿ 21 ದಿನಗಳ ಲಾಕ್ಡೌನ್ ಮುಗಿದರೂ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ 19 ದಿನಗಳವರೆಗೆ ವಿಸ್ತರಿಸಿದ್ದಾರೆ. ದೇಶದಲ್ಲಿ 21 ದಿನಗಳ ಲಾಕ್ಡೌನ್ ಮುಗಿ ಯುವ ವೇಳೆಗೆ ಕೊರೊನಾ ಸೋಂಕಿತರ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 31 ಮಂದಿ ಮೃತಪಟ್ಟಿದ್ದಾರೆ ಮತ್ತು ಒಂದೇ ದಿನ 1211 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ 339ಕ್ಕೆ ಮತ್ತು ಸೋಂಕಿತರ ಸಂಖ್ಯೆ 10363ಕ್ಕೆ ಏರಿಕೆಯಾಗಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾವ್ ಅಗರವಾಲ್ ಅವರು, ಒಂದು ನಿರ್ದಿಷ್ಟ ಪ್ರದೇಶದಲ್ಲಿ 28 ದಿನಗಳವರೆಗೆ ಯಾವುದೇ ಹೊಸ ಪ್ರಕರಣ ಪತ್ತೆಯಾಗದಿದ್ದರೆ ಮಾತ್ರ ನಾವು ಅದನ್ನು ಕೊರೊನಾ ಮುಕ್ತ ಎಂದು ಮತ್ತು ವೈರಸ್ ಹರಡುವುದನ್ನು ಸಂಪೂರ್ಣ ತಡೆಯಲು ಸಾಧ್ಯವಾಯಿತು ಎಂದು ಹೇಳಬಹುದು ಎಂದರು.
ಭಾರತದ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ
ನವದೆಹಲಿ, ಏ. 14: ಕೊರೊನಾ ವೈರಸ್ ವಿರುದ್ಧ ಭಾರತ ಕೈಗೊಂಡಿರುವ ಸಮಯೋಚಿತ ಕಠಿಣ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಪ್ರಧಾನಿ ನರೇಂದ್ರ ಮೋದಿ ತಾ. 14 ರಂದು ಲಾಕ್ಡೌನ್ ವಿಸ್ತರಿಸಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಪ್ರಧಾನಿ ಮೋದಿ ಕೈಗೊಂಡ ನಿರ್ಣಯವನ್ನು ಭಾರತದ ಸಮಯೋಚಿತ ಕಠಿಣ ನಿರ್ಧಾರ ಎಂದು ಬಣ್ಣಿಸಿದೆ. ಸಂಖ್ಯೆಗಳ ಲೆಕ್ಕದಲ್ಲಿ ಫಲಿತಾಂಶದ ಬಗ್ಗೆ ಮಾತನಾಡುವುದು ಈಗಲೇ ಸಾಧ್ಯವಿಲ್ಲ. ಆರು ವಾರಗಳ ರಾಷ್ಟ್ರೀಯ ಲಾಕ್ಡೌನ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೊನಾ ಸೋಂಕು ಪತ್ತೆ ಹಚ್ಚುವುದು, ಐಸೊಲೇಷನ್ಗಳಂತಹ ಕ್ರಮಗಳೂ ಸಹ ದೀರ್ಘಾವಧಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ, ಡಾ. ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. ಹಲವಾರು ಬೃಹತ್ ಸಮಸ್ಯೆಗಳ ನಡುವೆಯೂ ಭಾರತ ಕೊರೊನಾ ಸಾಂಕ್ರಾಮಿಕ ರೋಗ ತಡೆ ಹೋರಾಟಕ್ಕೆ ತನ್ನ ಬದ್ಧತೆ ತೋರುತ್ತಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರಿಗಳು, ಆರೋಗ್ಯ ಕಾರ್ಯಪಡೆಗೆ ಇರುವಷ್ಟೇ ಜವಾಬ್ದಾರಿ ಸಮುದಾಯಗಳಿಗೂ ಇದೆ ಎಂದು ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ರೂ. 1.22 ಲಕ್ಷ ಮೌಲ್ಯದ ಮದ್ಯ ವಶ
ಬೆಂಗಳೂರು, ಏ. 14: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಲಯ ಕಚೇರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ರೂ. 1.22 ಲಕ್ಷದ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಮೃತಹಳ್ಳಿಯ ಮುಂಭಾಗದ ರಸ್ತೆಯಲ್ಲಿ ವಿಶ್ವನಾಥ್ ಬಿನ್ ಮರಿಗೌಡ, ನರಸಮ್ಮ ಕೋಂಲೇಟ್ ಅಣ್ಣಯ್ಯಪ್ಪ ಇವರು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮದ್ಯದ ದಾಸ್ತಾನು ಸಾಗಾಣಿಕೆ ಮಾಡಿದ್ದರು. ಈ ಸಂದರ್ಭ ಗಸ್ತು ಕಾರ್ಯದಲ್ಲಿದ್ದ ಬೆಂಗಳೂರು ನಗರ ಜಿಲ್ಲೆ ಉತ್ತರ ವಲಯದ ಅಬಕಾರಿ ಉಪ ಆಯುಕ್ತ ಪಿ.ಎಸ್. ಶ್ರೀನಾಥ್ ಮತ್ತು ಯಶವಂತಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜಿ. ವಿವೇಕ್ ಅವರ ಮಾರ್ಗದರ್ಶನದಂತೆ ಗಸ್ತು ಕಾರ್ಯದಲ್ಲಿದ್ದಾಗ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರಕ್ಕೆ ಪಾಕ್ ಧರ್ಮಗುರುಗಳ ಎಚ್ಚರಿಕೆ
ಇಸ್ಲಾಮಾಬಾದ್, ಏ. 14: ಕೊರೊನಾ ವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಸರ್ಕಾರಕ್ಕೆ ಪಾಕ್ ಧರ್ಮ ಗುರುಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪಾಕಿಸ್ತಾನದಲ್ಲಿ 5,715 ಮಂದಿಯಲ್ಲಿ ಕೊರೊನಾ ವೈರಸ್ ತಗಲಿದ್ದು, ಈ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆಗಳನ್ನು ಸರ್ಕಾರ ನಿಷೇಧಿಸಿದೆ. ಐದಕ್ಕಿಂತಲೂ ಹೆಚ್ಚಿನ ಸಂಖ್ಯೆ ಜನರು ಒಂದೆಡೆ ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದ್ದರೂ ಸಹ, ಇಸ್ಲಾಮಾಬಾದ್ ಹಾಗೂ ರಾವಲ್ಫಿಂಡಿಯ 53 ಹಿರಿಯ ಧರ್ಮಗುರುಗಳು ಜಾಮಿಯಾ ದಾರುಲ್ ಉಲೂಮ್ ಜಾಕ್ರಿಯಾದಲ್ಲಿ ಸೇರಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆ ನಿಷೇಧ ಸಂಬಂಧ ಚರ್ಚೆ ನಡೆಸಿದ್ದಾರೆ.
ಐವರು ಉಗ್ರರನ್ನು ಬಂಧಿಸಿದ ಸೇನೆ
ಸೊಪೋರ್, ಏ. 14: ಜಮ್ಮು ಮತ್ತು ಕಾಶ್ಮೀರದ ಸೊಪೌರ್ನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಭಯೋತ್ಪಾದನಾ ಸಂಘಟನೆಗೆ ಸೇರಿದ್ದ ಐವರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತುಜಾರ್ ಗ್ರಾಮದಲ್ಲಿ ನಾಗರಿಕ ಪ್ರದೇಶಗಳ ಮೇಲೆ ನಡೆದಿದ್ದ ಗ್ರೆನೇಡ್ ದಾಳಿಯಲ್ಲಿ ಈ ಐವರೂ ಉಗ್ರರು ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಸೊಪೋರ್ನಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾ ಪಡೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು. ಇದರಂತೆ ಐವರು ಉಗ್ರರನ್ನು ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ.