ಮಡಿಕೇರಿ, ಏ. 14: ಕೊರೊನಾ ವಿರುದ್ಧ ಹೋರಾಡುತ್ತಿರುವ ವೀರರಿಗೆ ಕೊಡಗು ಸೇವಾ ಕೇಂದ್ರದ ವತಿಯಿಂದ ನಗರದ ಕೊಡವ ಸಮಾಜದಲ್ಲಿರುವ ಐನ್‍ಮನೆ ಕೆಫೆಯಲ್ಲಿ ಉಚಿತವಾಗಿ ಕಾಫಿ ಹಾಗೂ ಸ್ಯಾಂಡ್‍ವಿಚ್ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ವೈದ್ಯಕೀಯ ಇಲಾಖೆ, ಗೃಹರಕ್ಷಕ ದಳ, ಅಗ್ನಿ ಶಾಮಕದಳ, ಚೆಸ್ಕಾಂ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಕೊರೊನಾ ವಿರುದ್ಧದ ಸತತ ಪರಿಶ್ರಮ ಗಮನಿಸಿ ಇವರುಗಳಿಗೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಸೇವೆ ನೀಡುತ್ತಿದ್ದೇವೆ. ಕಾಫಿ ಹಾಗೂ ಸ್ಯಾಂಡ್‍ವಿಚ್‍ಗಳನ್ನು ‘ಪಾರ್‍ಸಲ್’ ವ್ಯವಸ್ಥೆಯ ಮೂಲಕ ಉಚಿತವಾಗಿ ನೀಡುತ್ತಿದ್ದೇವೆ. ತಾ.13 ರಿಂದ ಪ್ರಾರಂಭವಾಗಿದ್ದು, ಲಾಕ್‍ಡೌನ್ ಅಂತ್ಯವಾಗುವವರೆಗೂ ಈ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಐನ್‍ಮನೆ ಕೆಫೆಯ ಮಾಲೀಕ ತಮ್ಮು ಪೂವಯ್ಯ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಐನ್‍ಮನೆ ಸಿಬ್ಬಂದಿ ಲೋಕೇಶ್, ದೀಪಕ್ ಹಾಗೂ ಪುನೀತ್ ಅಯ್ಯಣ್ಣ ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ಪ್ರತಿದಿನ ಇಲ್ಲಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಪ್ರತಿದಿನ ಸುಮಾರು 70 ಮಂದಿಗೆ ಉಚಿತ ಕಾಫಿ ಹಾಗೂ ಸ್ಯಾಂಡ್‍ವಿಚ್ ತಯಾರಿಸಿ ಸೇವೆ ಸಲ್ಲಿಸುತ್ತಿದ್ದಾರೆ.