ವೀರಾಜಪೇಟೆ, ಏ.13: ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ಇಂದು ಬೆಳಗಿನ 6ಗಂಟೆಯಿಂದ ಅಪರಾಹ್ನ 12ಗಂಟೆಯವರೆಗೆ ಪಟ್ಟಣದಾದ್ಯಂತ ಮುಕ್ತವಾಗಿ ಸಂಚರಿಸಿದರು. ಮುಖ್ಯ ರಸ್ತೆ, ಗೋಣಿಕೊಪ್ಪ ರಸ್ತೆ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು ಪೊಲೀಸರು ವಾಹನ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದರು.
ಎಲ್ಲ ಬ್ಯಾಂಕ್‍ಗಳ ಮುಂದೆ ಗ್ರಾಹಕರು ಅಧಿಕವಾಗಿದ್ದರಿಂದ ಎಲ್ಲರಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವೆನಿಸಿತ್ತು. ಗ್ರಾಹಕರು ಎಲ್ಲ ಅಂಗಡಿಗಳ ಮುಂದೆ ಮುಗಿ ಬಿದ್ದು ಕೋಳಿ, ಕುರಿ ಮಾಂಸ ಮೀನನ್ನು ಖರೀದಿಸಿದರು. ಬೇಕರಿಗಳನ್ನು ತೆರೆಯಲಾಗಿದ್ದರೂ ಬೇಕರಿ ಅಂಗಡಿಗಳ ತಿನಿಸುಗಳ ಖರೀದಿಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.
ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಗ್ರಾಹಕರು ದಿನಸಿ, ಮಾಂಸ ಹಾಗೂ ತರಕಾರಿ ಕೊಂಡುಕೊಳ್ಳಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂತು.
ಈ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ವೇತನ ಪಡೆದ ಸಿದ್ದಾಪುರ, ನೆಲ್ಲಿಹುದಿಕೇರಿ ವ್ಯಾಪ್ತಿಯ ಕೂಲಿಕಾರ್ಮಿಕರು ಸೋಮವಾರದಂದು ಸಾಮಗ್ರಿಗಳನ್ನು ಕೊಂಡುಕೊಳ್ಳಲು ಆಗಮಿಸಿದ್ದರು.
ಮಾಂಸ, ಮೀನು ಮಾರಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಾಂಸ ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದುದು ಕಂಡು ಬಂತು.