ಮಡಿಕೇರಿ, ಏ. 13: ಈಸ್ಟರ್ ಹಬ್ಬ ಮುಗಿಸಿಕೊಂಡು ಹಿಂತಿರುಗುವ ವೇಳೆಯಲ್ಲಿ; ಜೀಪೊಂದು ಚಾಲಕನ ಹತೋಟಿ ತಪ್ಪಿ ಮಗುಚಿಕೊಂಡಿರುವ ಪರಿಣಾಮ; ಆತ ಕೊನೆಯುಸಿರೆಳೆಯುವದರೊಂದಿಗೆ; ಇತರ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ 9.30ರ ಸುಮಾರಿಗೆ ಪಾಲಿಬೆಟ್ಟ - ಅಮ್ಮತ್ತಿ ನಡುವೆ ಹಂಚಿಕಾಡು ಎಂಬಲ್ಲಿ ದುರ್ಘಟನೆ ಸಂಭವಿಸಿದೆ.

ಅಮ್ಮತ್ತಿ ನಿವಾಸಿ ಟಾಮಿ ರಜಾರಿಯೋ ಅವರ ಪುತ್ರ ಜೀಪನ್ನು ಚಾಲಿಸುತ್ತಿದ್ದ ದಿಲ್ಸನ್ ರಜಾರಿಯೋ (30) ಮೃತ ದುರ್ದೈವಿ. ಅಲ್ಲಿನ ನಿವಾಸಿ ಅಂಟೋ ಮ್ಯಾಥ್ಯೂ ಎಂಬವರಿಗೆ ಸೇರಿದ ಜೀಪಿನಲ್ಲಿ (ಕೆ.ಎ. 12 ಎಂ.ಎ. 0383) ಮಾಲೀಕ ಸೇರಿದಂತೆ ಮೃತ ದಿಲ್ಸನ್ ಹಾಗೂ ಪಿ.ಪಿ. ಜಾನ್ಸನ್, ರಾಜನ್, ಲೂಯಿಪಿಂಟೋ ಇವರುಗಳು ಪಾಲಿಬೆಟ್ಟದಲ್ಲಿ ಬಂಧುವೊಬ್ಬರ ಕುಟುಂಬದ ಈಸ್ಟರ್ ಹಬ್ಬದಲ್ಲಿ ಪಾಲ್ಗೊಂಡು; ಹಿಂತಿರುಗುವ ವೇಳೆ ಅವಘಡ ಸಂಭವಿಸಿದೆ.ಗಾಯಾಳುಗಳ ಪೈಕಿ ಮೂವರು ಪುತ್ತೂರು ಹಾಗೂ ಓರ್ವ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರ್ಘಟನೆ ಸಂಬಂಧ ಸಿದ್ದಾಪುರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಠಾಣಾಧಿಕಾರಿ ಬೋಜಪ್ಪ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸುವದರೊಂದಿಗೆ ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.