ಗೋಣಿಕೊಪ್ಪಲು, ಏ.13 : ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ವ್ಯಾಪಾರ ನಡೆಸಲು ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಇರುವ ವ್ಯವಸ್ಥೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ನಾಗರಿಕರಿಗೆ ಸುಲಭ ರೀತಿಯಲ್ಲಿ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಖಡಕ್ ಸೂಚನೆ ನೀಡಿದರು.

ಮುಂಜಾನೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆರ್‍ಎಂಸಿಯ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಖಾಲಿ ಇರುವ ಜಾಗಗಳಲ್ಲಿ ನಾಗರಿಕರ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ನಾಗರಿಕರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ವಿಶೇಷ ಗಮನ ಹರಿಸುವಂತೆ ಇದೇ ಸಂದರ್ಭ ಮನವಿ ಮಾಡಿದರು.

ದಿಢೀರ್ ಬೆಳವಣಿಗೆಯಿಂದ ಆರಂಭದಲ್ಲಿ ಒಂದಷ್ಟು ವ್ಯತ್ಯಾಸವಾಗಿದೆ. ಮುಂದಿನ ದಿನದಲ್ಲಿ ಇಂತಹ ವ್ಯತ್ಯಾಸಗಳು ನಡೆಯಬಾರದು ನಾಗರಿಕರಿಗೆ ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿಯೇ ತರಕಾರಿ ಹಾಗೂ ಹಣ್ಣು ಹಂಪಲು ದೊರೆಯಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣವೂ ಸಾಕಷ್ಟು ವಿಸ್ತೀರ್ಣ ಇರುವುದರಿಂದ ಮುಂದಿನ ದಿನದಲ್ಲಿ ವ್ಯಾಪಾರಸ್ಥರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಮಗ್ರಿಗಳು ವಿತರಣೆಯಾಗಲು ವಿಶೇಷ ಕ್ರಮ ವಹಿಸಲು ಹಾಗೂ ಸಾಮಗ್ರಿಗಳಿಗಿರುವ ದರಪಟ್ಟಿಯನ್ನು ಪ್ರತಿ ವ್ಯಾಪಾರಸ್ಥರಲ್ಲಿ ನಾಗರಿಕರಿಗೆ ಕಾಣುವಂತೆ ಇಡಬೇಕು ಎಂದು ಸೂಚಿಸಿದರು.

ಗೋಣಿಕೊಪ್ಪ ನಗರದ ಮಾರುಕಟ್ಟೆ ಆವರಣದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ನಾಗರಿಕರು ಆಗಮಿಸಿದ ಪರಿಣಾಮ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತರಕಾರಿ ಮಾರಾಟ ಮಾಡುವವರು ಆರ್‍ಎಂಸಿ ಯಾರ್ಡ್‍ನಲ್ಲಿ ವ್ಯಾಪಾರ ನಡೆಸುವಂತೆ ನಿರ್ಣಯ ಕೈಗೊಳ್ಳಾಗಿತ್ತು. ದಿಢೀರ್ ಬೆಳವಣಿಗೆಯಿಂದ ವ್ಯಾಪಾರಸ್ಥರು ಮುಂಜಾನೆಯೇ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಿದರು. ನಗರದ ನಿವಾಸಿಗಳು ನಡೆದುಕೊಂಡೆ ತೆರಳಿದರು.

ನಗರದಲ್ಲಿ ಒಂದು ಗಂಟೆಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಶ್ರಮ ಪಟ್ಟರು. ನಗರದಲ್ಲಿ ಬೇಕರಿ, ಮಾಂಸದ ಅಂಗಡಿ, ಮೀನಿನ ಅಂಗಡಿ ತೆರೆದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸಿ ಪಾಕಿರ್ಂಗ್ ಸೌಕರ್ಯವಿಲ್ಲದೆ. ಪರದಾಡುತ್ತಿದ್ದರು. ಶಾಸಕರ ಭೇಟಿಯ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ.ಬೋಪಣ್ಣ ಆರ್‍ಎಂಸಿಯ ಅಧ್ಯಕ್ಷ ಸುಜಾ ಪೂಣಚ್ಚ, ಹಾಗೂ ಇತರರು ಹಾಜರಿದ್ದರು.

ವಿರೋಧ

ಗೋಣಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ಜಮ್ಮಡ ಸೋಮಣ್ಣ, ಮುರುಗ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತರಕಾರಿ ಮಾರಾಟ ವ್ಯವಸ್ಥೆ ಕಲ್ಪಿಸುವ ಬದಲು ಸ್ಥಳೀಯ ಪ್ರೌಢಶಾಲಾ ಮೈದಾನದಲ್ಲಿ ವ್ಯವಸ್ಥೆಗೆ ಮುಂದಾದರೆ ಉತ್ತಮ. ಇದರಿಂದ ಬಡವರಿಗೆ ಒಳಿತಾಗುವುದಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಬಲ್ಲದು. ಇಂತಹ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.