ವೀರಾಜಪೇಟೆ, ಏ. 13: ವೀರಾಜಪೇಟೆ ಬಳಿಯ ವಿ.ಬಾಡಗ ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಪಡಿತರ ಕಾರ್ಡು ದಾರರ ದೂರಿನ ಮೇರೆ ತಹಶೀಲ್ದಾರ್ ನಂದೀಶ್ ಅವರು ತಾಲೂಕು ಕಚೇರಿಯ ಆಹಾರ ಶಿರಸ್ತೆದಾರರೊಂದಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿ ಅವ್ಯವಹಾರಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಸ್ಥಳದಲ್ಲಿಯೇ ರದ್ದುಪಡಿಸಿ; ಈ ನ್ಯಾಯಬೆಲೆ ಅಂಗಡಿಯ ಪಡಿತರ ಕಾರ್ಡುದಾರರು ಸಮೀಪದ ಕುಟ್ಟಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿಗಳನ್ನು ಪಡೆಯುವಂತೆ ನಿರ್ದೇಶನ ನೀಡಿದರು.ಈ ನ್ಯಾಯಬೆಲೆ ಅಂಗಡಿಯ ಉಸ್ತುವಾರಿಯಲ್ಲಿರುವ ಈಶ್ವರ ಎಂಬವರು ಪಡಿತರ ಗ್ರಾಹಕರಿಗೆ ಉಚಿತ ಅಕ್ಕಿ ನೀಡಲು 40ಕೆ.ಜಿ. ಅಕ್ಕಿ ಪಡೆಯುವ ಗ್ರಾಹಕರಿಂದ ರೂ 240 ನಗದು ಪಡೆಯುತ್ತಿದ್ದರಲ್ಲದೆ ಎಲ್ಲ ಗ್ರಾಹಕರಿಂದಲೂ ಇಂತಿಷ್ಟೆಂದು ಹಣ ಪಡೆಯುತ್ತಿದ್ದರು. ಇಂದು ನ್ಯಾಯಬೆಲೆ ಅಂಗಡಿಯ ಪರಿಶೀಲನೆಗೆ ತೆರಳಿದ ಅಧಿಕಾರಿಗಳೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನ್ಯಾಯಬೆಲೆ ಅಂಗಡಿಗೆ ಬೀಗ ಜಡಿಯುವ ಕ್ರಮ ಕೈಗೊಂಡರು.