ಕೂಡಿಗೆ, ಏ. 14: ಸುಂದರನಗರದ ಮದ್ಯದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಅಬಕಾರಿ ತಂಡ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಘೋಷಿಸಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಅಬಕಾರಿ ಉಪನಿರ್ದೇಶಕರ ಮಾರ್ಗದರ್ಶನದ ಮೇರೆಗೆ ಮಡಿಕೇರಿಯ ಅಬಕಾರಿ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.ಲಾಕ್ ಡೌನ್ ಹಿನ್ನೆಲೆ ಮದ್ಯದಂಗಡಿಗೆ ಸೀಲ್ ಹಾಕಿದ್ದನ್ನು ತೆರೆದು ಮದ್ಯ ಮಾರಾಟ ಮಾಡಿರುವುದು ಕಂಡು ಬಂದಿದ್ದು, ಅಧಿಕಾರಿಗಳ ಪರಿಶೀಲನೆಯಲ್ಲಿ ಸುಮಾರು 460 ಲೀಟರ್ ಮದ್ಯ ವ್ಯತ್ಯಾಸ ಕಂಡು ಬಂದಿದೆ. ಈ ಸಂಬಂಧ ಅಧಿಕಾರಿಗಳು ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.