ಕೂಡಿಗೆ, ಏ. 12: ಲಾಕ್ಡೌನ್ ಹಿನ್ನೆಲೆಯಲ್ಲಿ ಸರಕಾರಿ ಕಾಮಗಾರಿಗೆ ಮರಳು ಮತ್ತು ಎಂ ಸ್ಯಾಂಡ್ ಮತ್ತು ಜಲ್ಲಿ ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ಲಾರಿಗಳು ಅಕ್ರಮದಲ್ಲಿ ತೊಡಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಜಿಲ್ಲೆಯಲ್ಲಿ ಸರಕಾರಿ ಕಾಮಗಾರಿಗಳಿಗೆ ಎಂ ಸ್ಯಾಂಡ್, ಜಲ್ಲಿ ಪೂರೈಕೆಗೆ ಕೆಲವು ಟಿಪ್ಪರ್ಗಳಿಗೆ ವಿನಾಯ್ತಿ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಗುತ್ತಿಗೆದಾರರು, ಲಾರಿ ಮಾಲೀಕರು ಇಲಾಖೆ ಕಾಮಗಾರಿಗಳಿಗೆ ಎರಡು ಲೋಡ್ ಅಗತ್ಯ ವಸ್ತುಗಳನ್ನು ಪೂರೈಸಿ ಇನ್ನುಳಿದ ಕೆಲ ಲೋಡ್ಗಳನ್ನು ಖಾಸಗಿ ವ್ಯಕ್ತಿಗಳಿಗೆ ಪೂರೈಕೆ ಮಾಡುತ್ತಿರುವ ಬಗ್ಗೆ ಇತರೆ ಲಾರಿ ಮಾಲೀಕರು ಅಸಮಾಧಾನ ಹಾಗೂ ಆರೋಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಅನುಮತಿ ಪತ್ರ ದುರುಪಯೋಗಪಡಿಸಿಕೊಂಡು ಮನೆ ನಿರ್ಮಾಣ ಕಾಮಗಾರಿಗೆ ಎಂ ಸ್ಯಾಂಡ್, ಜಲ್ಲಿ ಪೂರೈಕೆ ಮಾಡಲಾಗುತ್ತಿದೆ. 15 ಸಾವಿರದ ಎಂ ಸ್ಯಾಂಡ್ ಅನ್ನು ಟಿಪ್ಪರ್ ಲೋಡ್ ಒಂದಕ್ಕೆ ರೂ . 25 ಸಾವಿರಕ್ಕೆ ಪೂರೈಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪೆÇಲೀಸರು ಪರಿಶೀಲಿಸಿ ಅಕ್ರಮ ಎಸಗುತ್ತಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಒಂದು ಕಲ್ಲು ಕೋರೆಯಿಂದ ಸರಕಾರಿ ಕೆಲಸಕ್ಕೆ ಎಂದು ಕೆಲ ಲಾರಿಗಳಲ್ಲಿ ಸಾಗಾಟ ಅನುಮತಿ ನೀಡಿದರೆ ಇದೇ ನೆಪದಲ್ಲಿ ಅನೇಕ ಲಾರಿಗಳಲ್ಲಿ ವಸ್ತುಗಳು ಲೋಡ್ಗಟ್ಟಲೆ ಸಾಗಾಟವಾಗುತ್ತವೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಕೆಲವೆಡೆ ಮನೆ ಕಾಮಗಾರಿ ನಡೆಯುತ್ತಿದ್ದು, ಇದು ಸಾಮಾನ್ಯವಾದರೆ ಸಂಬಂಧಿಸಿದ ಇಲಾಖೆ ಎಲ್ಲಾ ಲಾರಿ ಮಾಲೀಕರಿಗೂ ಅವಕಾಶ ನೀಡಬೇಕೆಂದು ಈ ವ್ಯಾಪ್ತಿಯ ಲಾರಿ ಮಾಲೀಕರು ಹಾಗೂ ಕಾರ್ಮಿಕರ ಒತ್ತಾಯಿಸಿದ್ದಾರೆ.