ಮಡಿಕೇರಿ, ಏ. 12 : ಕೊರೊನಾ ಸಂಬಂಧ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧ ಉಲ್ಲಂಘಿಸಿ ಮೋಜಿನಲ್ಲಿ ತೊಡಗಿದ್ದವರ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಂದು ಆರೋಪಿಗಳು ಕಡಗದಾಳು ಗ್ರಾಮ ಕತ್ತಲೆಕಾಡು ಪೈಸಾರಿಯ ಮೈದಾನದಲ್ಲಿ ಗುಂಪು ಸೇರಿಕೊಂಡು ಫೈರ್ ಕ್ಯಾಂಪ್‍ನಲ್ಲಿ ಖಾಲಿ ಬಿಯರ್ ಬಾಟಲಿಗಳನ್ನು ಮರಕ್ಕೆ ಕಟ್ಟಿಕೊಂಡು, ಅದಕ್ಕೆ ಕಲ್ಲು ಹೊಡೆದು ಕೇಕೆ ಹಾಕಿ ಮನೋರಂಜನೆ ಮಾಡುತ್ತಿದ್ದು ವಿಷಯ ತಿಳಿದ ಪೊಲೀಸರು ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ ಮೇರೆಗೆ ಕಲಂ 188, 269, ಐಪಿಸಿ ಮತ್ತು 51(ಬಿ) ಡಿಎಂ ಆಕ್ಟ್ 2005ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗಿದೆ.
ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಣ್ಣೇಕರ್ ನಿರ್ದೇಶನದಂತೆ, ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮತ್ತು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ದಿನೇಶ್ ಮತ್ತು ಚಾಲಕ ಪ್ರವೀಣ್‍ಕುಮಾರ್ ದಾಳಿ ಮಾಡಿದ್ದಾರೆ. ಒಬ್ಬ ಆರೋಪಿ ಅಭಿಲಾಷ್ ಎಂಬವರನ್ನು ವಿಚಾರಣೆ ಮಾಡಿ ನೋಟೀಸು ನೀಡಿರುತ್ತಾರೆ. ಅಲ್ಲದೆ ಇತರ ಆvರೋಪಿಗಳು ಬಿಟ್ಟು ಹೋದ 4 ಮೋಟಾರು ಬೈಕುಗಳನ್ನು ವಶಕ್ಕೆ ಪಡೆದು ನ್ಯಾಯಾಯಲಕ್ಕೆ ವರದಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಮೇಲ್ಕಂಡ ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಣ್ಣೇಕರ್ ಪ್ರಶಂಸಿಸಿದ್ದಾರೆ.