ಭಾಗಮಂಡಲ, ಏ. 12: ಭಾಗಮಂಡಲ ಸಮೀಪದ ತಾವೂರು ಗ್ರಾಮದ ಖಾಸಗಿ ಬಸ್ ಚಾಲಕ ನಂಜುಂಡ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ.
ಚಾಲಕ ನಂಜುಂಡ ಖಾಸಗಿ ಬಸ್ವೊಂದರಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಇದೀಗ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕವಾಗಿ ಕಂಗೆಟ್ಟಿದ್ದಾರೆ. “ಮಾರ್ಚ್ 17ರಂದು ಪತಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದೆಯೆಂದು ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದರು. ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಕೊರೊನಾ ಸೋಂಕು ವ್ಯಾಪಿಸಿದ್ದರಿಂದ ಇತರ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ಬಳಿಕ ಮರಳಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಂಗಲಾಚಿದರೂ ವೈದ್ಯರ ನೆರವು ಸಿಗಲಿಲ್ಲ. ಇದೀಗ ಅಸಹಾಯಕ ಪರಿಸ್ಥಿತಿ ಎದುರಾಗಿದೆ” ಎಂದು ಪತ್ನಿ ವನಜಾಕ್ಷಿ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು. ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ಅವರು ಹೇಳಿದರು.
ಚಿಕಿತ್ಸೆಗಾಗಿ ಕೈಯಲಿದ್ದ ಹಣವೆಲ್ಲಾ ಖರ್ಚಾಗಿದೆ. ಹದಿನೈದು ದಿನಗಳಿಗೊಮ್ಮೆ ಡಯಾಲಿಸಿಸ್ ನಡೆಸಬೇಕಿದೆ. ಇತರ ಆರ್ಥಿಕ ಮೂಲಗಳಿಲ್ಲದೇ ಚಾಲಕ ಕುಟುಂಬ ಸಂಕಷ್ಟವನ್ನೆದುರಿಸುತ್ತಿದ್ದು, ದಾನಿಗಳ ನೆರವಿನ ಅಗತ್ಯವಿದೆ. ಅಭಯಹಸ್ತ ಚಾಚುವವರು ದೂರವಾಣಿ ಸಂಖ್ಯೆ 9480142161 ಸಂಪರ್ಕಿಸಬಹುದು. -ಸುನಿಲ್