ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಿಂದ ಪತ್ರ
ಮಡಿಕೇರಿ, ಏ. 11: ಕರ್ನಾಟಕ ಸರಕಾರವು ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಕಲ್ಪಿಸುವ ಸಾಲ ಯೋಜನೆ ಬಗ್ಗೆ ಕೆಲವೊಂದು ಮಾರ್ಪಾಡುಗೊಳಿಸುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಸಂಬಂಧಿಸಿದವರಿಗೆ ಕೋರಿ ಪತ್ರ ಬರೆದಿದ್ದಾರೆ. ಆ ಮೂಲಕ ತಾಂತ್ರಿಕ ತೊಡಕುಗಳ ನಿವಾರಣೆಗೆ ಕೋರಿದ್ದಾರೆ.
ರಾಜ್ಯದ ರೈತರಿಗೆ ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ ರೂ. 3 ಲಕ್ಷಗಳವರೆಗೆ ಬೆಳೆ ಸಾಲ ದೊರೆಯುತ್ತಿದ್ದು, ಈ ಯೋಜನೆಯು ಇಲ್ಲಿಯವರೆಗೆ ಜಾರಿಯಲ್ಲಿರುತ್ತದೆ. ಇದೀಗ ರಾಜ್ಯ ಸರ್ಕಾರದ ಉಲ್ಲೇಖಿತ ಆದೇಶದನ್ವಯ ಸಹಕಾರ ಸಂಘಗಳಿಂದ ರೈತರಿಗೆ ನೀಡಲಾಗುವ ಕೃಷಿ ಸಾಲಗಳ ಮೇಲಿನ ಶೂನ್ಯ ಬಡ್ಡಿ ದರದ ಯೋಜನೆಯನ್ನು ಕೆಲವೊಂದು ಷರತ್ತುಗಳನ್ನು ಮಾರ್ಪಡಿಸಿ ಜಾರಿಗೊಳಿಸಲು ಆದೇಶಿಸಿದೆ.
ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆಯು, ರೈತನು ಹೊಂದಿರುವ ಪಡಿತರ ಚೀಟಿಯ ಆಧಾರದಲ್ಲಿ, ಒಂದು ಕುಟುಂಬಕ್ಕೆ ಗರಿಷ್ಠ ರೂ. 3 ಲಕ್ಷಗಳಿಗೆ ನೀಡಿದ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಲ ಪಡೆಯುವ ರೈತನು ಸರ್ಕಾರಿ / ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರನಾಗಿದ್ದು, ಮಾಸಿಕ ರೂ. 20000/- ವೇತನ / ಪಿಂಚಣಿ ಪಡೆಯುತ್ತಿರುವ ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಸರ್ಕಾರದ ಬಡ್ಡಿ ಸಹಾಯಧನ ಅನ್ವಯಿಸುವುದಿಲ್ಲ. ಡಿಸಿಸಿ ಬ್ಯಾಂಕ್ ಅಥವಾ ಇತರ ವಾಣಿಜ್ಯ ಬ್ಯಾಂಕಿನಲ್ಲಿ ರೈತರು ಹೊಂದಿರುವ ಉಳಿತಾಯ ಖಾತೆಗಳ ಮೂಲಕ ವಿತರಿಸಿದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ.
ಗೇಣಿ ಅಥವಾ ಗುತ್ತಿಗೆ ಆಧಾರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೂ ಸಹ ಈ ಯೋಜನೆ ಅನ್ವಯವಾಗುತ್ತದೆ. ಇದಕ್ಕಾಗಿ ಭೂ ಮಾಲೀಕತ್ವ ಯಾವುದೇ ವ್ಯಕ್ತಿಯ ಹೆಸರಿನಲ್ಲಿದ್ದರೂ ಸಹ ಪಹಣಿಯಲ್ಲಿ ಸಾಗುವಳಿದಾರರ ಹೆಸರಿದ್ದರೆ ಮಾತ್ರ ಅಂತಹ ರೈತರಿಗೆ ಸಾಲ ವಿತರಿಸತಕ್ಕದ್ದು. ಭೂ ಮಾಲೀಕತ್ವ ಮತ್ತು ಸಾಗುವಳಿದಾರನ ಹೆಸರು ಬೇರೆ ಇದ್ದರೆ ಅಂತಹ ಪ್ರಕರಣಗಳಲ್ಲಿ ಭೂ ಮಾಲೀಕತ್ವ ಹೊಂದಿರುವ ವ್ಯಕ್ತಿಗೆ ಸಾಲ ವಿತರಿಸತಕ್ಕದ್ದಲ್ಲ. ಮೇಲಿನ ಷರತ್ತುಗಳು ಏಪ್ರಿಲ್ 1, 2019 ರಿಂದ ಮಾರ್ಚ್ 31, 2020ರವರೆಗೆ ನೀಡಲಾದ ಕೃಷಿ ಅಲ್ಪಾವಧಿ ಸಾಲಗಳಿಗೆ ಅನ್ವಯವಾಗುತ್ತದೆ.
ಮೇಲಿನ ಆದೇಶದಲ್ಲಿ ವಿಧಿಸಲಾಗಿರುವ ಷರತ್ತುಗಳು ರೈತರು ಮತ್ತು ಸಹಕಾರ ಸಂಘಗಳಿಗೆ ಪೂರಕವಾಗಿರುವುದಿಲ್ಲವೆಂದು ಮನಗಂಡು ದಿನಾಂಕ 07/04/2020 ಮತ್ತು 08/04/2020 ರಂದು ಜಿಲ್ಲೆಯಲ್ಲಿನ 73 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುಖಾಂತರ ತಾಲೂಕುವಾರು ಸಭೆಯನ್ನು ನಡೆಸಿ, ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶವನ್ನು ಹಿಂಪಡೆದು, ಪರಿಷ್ಕøತ ಆದೇಶವನ್ನು ಹೊರಡಿಸುವ ಮುಖಾಂತರ ಅನುಕೂಲವನ್ನು ಕಲ್ಪಿಸಿಕೊಡುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.
ಮನವಿಯಲ್ಲಿನ ಮುಖ್ಯಾಂಶಗಳು: ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಠ ರೂ. 3 ಲಕ್ಷಗಳಿಗೆ ನೀಡಿದ ಸಾಲಗಳಿಗೆ ಅನ್ವಯಿಸತಕ್ಕದ್ದೆಂದು” ಇದ್ದು, ಒಂದು “ಕುಟುಂಬ” ಎಂದು ರೂ. 3 ಲಕ್ಷಕ್ಕೆ ಸೀಮಿತಗೊಳಿಸಿರುವ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಯನ್ನು ಕೈಬಿಟ್ಟು, ರೈತರು ನೈಜವಾಗಿ ಹೊಂದಿರುವ ಸ್ಥಿರಾಸ್ತಿಯ ಆಧಾರದಲ್ಲಿ ಪಡೆದಿರುವ ಬೆಳೆ ಸಾಲಕ್ಕೆ ಪ್ರತ್ಯೇಕವಾಗಿ ರೂ. 3 ಲಕ್ಷಗಳ ವೈಯಕ್ತಿಕ ಮಿತಿಯನ್ನು ನಿಗದಿಗೊಳಿಸಿ, ಈ ಹಿಂದಿನ ಸಾಲುಗಳಂತೆ ನೀಡಲಾಗುತ್ತಿದ್ದ, ವೈಯಕ್ತಿಕ ಗರಿಷ್ಠ ರೂ. 3 ಲಕ್ಷಗಳವರೆಗಿನ ಸಾಲಕ್ಕೂ ಬಡ್ಡಿ ರಿಯಾಯಿತಿ ಒದಗಿಸಿಕೊಡಲು ಅನುಕೂಲವಾಗುವಂತೆ ಉಲ್ಲೇಖಿತ ಆದೇಶವನ್ನು ಪರಿಷ್ಕರಿಸಬೇಕೆಂದು ಕೋರಲಾಗಿದೆ.
ಗೇಣಿ ಅಥವಾ ಗುತ್ತಿಗೆ ಆಧಾರದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೂ ಸಹ ಈ ಯೋಜನೆ ಅನ್ವಯವಾಗುತ್ತದೆ. ಇದಕ್ಕಾಗಿ ಭೂ ಮಾಲೀಕತ್ವ ಯಾವುದೇ ವ್ಯಕ್ತಿಯ ಹೆಸರಿನಲ್ಲಿದ್ದರೂ ಸಹ ಪಹಣಿಯಲ್ಲಿ ಸಾಗುವಳಿದಾರರ ಹೆಸರಿದ್ದರೆ ಮಾತ್ರ ಅಂತಹ ರೈತರಿಗೆ ಸಾಲ ವಿತರಿಸತಕ್ಕದ್ದು. ಭೂ ಮಾಲೀಕತ್ವ ಮತ್ತು ಸಾಗುವಳಿದಾರನ ಹೆಸರು ಬೇರೆ ಇದ್ದರೆ ಅಂತಹ ಪ್ರಕರಣಗಳಲ್ಲಿ ಭೂ ಮಾಲೀಕತ್ವ ಹೊಂದಿರುವ ವ್ಯಕ್ತಿಗೆ ಸಾಲ ವಿತರಿಸತಕ್ಕದ್ದಲ್ಲ. ಗೇಣಿ ಅಥವಾ ಗುತ್ತಿಗೆ ಆಧಾರದಲ್ಲಿನ ಸಾಗುವಳಿಗೆ ಸಾಲ ನೀಡಿದಲ್ಲಿ, ಫಾರಂ-3ರ ಬೋಜ ದಾಖಲಾತಿಯು ಆಸ್ತಿಯ ಮಾಲೀಕನ ಹೆಸರಿನಲ್ಲಿ ಮಾಡಬೇಕಾಗಿರುವುದರಿಂದ ಸಾಲ ವಿತರಣೆಯು ಕಷ್ಟಕರವಾಗಿದೆ.
ಈ ಬಡ್ಡಿ ದರವು ದಿನಾಂಕ 01.04.2019 ರಿಂದ ದಿನಾಂಕ 31.03.2020 ರವರೆಗೆ ನೀಡಲಾದ ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ 2019-20ನೇ ಸಾಲಿನ ಸಂಪೂರ್ಣ ಸಾಲ ವಿತರಣೆ ಪ್ರಕ್ರಿಯೆಯು ಪೂರ್ಣಗೊಂಡಿರುವುದರಿಂದ, ಸಾಲ ವಸೂಲಾತಿ ಪ್ರಕ್ರಿಯೆಯು ಪ್ರಾರಂಭದ ಹಂತದಲ್ಲಿರುತ್ತದೆ. ಈ ಸಂದರ್ಭದಲ್ಲಿ ಸರ್ಕಾರವು ವಿಧಿಸಿರುವ ಷರತ್ತುಗಳಿಂದಾಗಿ, ಕೆಲವೊಂದಷ್ಟು ರೈತರು ಸಾಮಾನ್ಯ ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಮರುಪಾವತಿಸಬೇಕೆಂದು ಸೂಚಿಸಿದಲ್ಲಿ, ರೈತರು ಪಡೆದ ಸಾಲವನ್ನು ಮರುಪಾವತಿಸುವಲ್ಲಿ ಹಿಂದೇಟು ಹಾಕುವ ಪ್ರಮೇಯವು ಒದಗಿ ಬರುವುದಲ್ಲದೆ, ವಾಯಿದೆ ಮೀರಿದ ಸಾಲದ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ, ತಳಹಂತದ ಸಹಕಾರ ಸಂಘಗಳು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಈ ಹಿಂದಿನ ಸಾಲುಗಳಲ್ಲಿ ಸರ್ಕಾರವು ನೀಡುತ್ತಿರುವ ಅನುದಾನವನ್ನು ಯಥಾವತ್ತಾಗಿ ಮುಂದುವರೆಸಲು ಕೋರಿಕೊಳ್ಳುತ್ತಾ, ಮುಂದಿನ ಸಾಲುಗಳಿಗೆ ಸಾಲ ವಿತರಣೆ ಪ್ರಾರಂಭದ ಹಂತದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸುವಂತೆ ಕೋರಲಾಗಿದೆ.
ಡಿಸಿಸಿ ಬ್ಯಾಂಕ್ ಅಥವಾ ಇತರ ವಾಣಿಜ್ಯ ಬ್ಯಾಂಕಿನಲ್ಲಿ ರೈತರು ಹೊಂದಿರುವ ಉಳಿತಾಯ ಖಾತೆಗಳ ಮೂಲಕ ವಿತರಿಸಿದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ. ಡಿಸಿಸಿ ಬ್ಯಾಂಕಿನ ರೂಪೇ ಕೆಸಿಸಿ ಖಾತೆಗೆ ರೈತರ ಸಾಲದ ಮೊತ್ತವನ್ನು ಜಮಾ ಮಾಡಿದ್ದಲ್ಲಿ, ರೈತರು ಎ.ಟಿ.ಎಂ. ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಲಿದ್ದು, ಸಹಕಾರ ಸಂಘಗಳು ಬಂಡವಾಳದ ಕೊರತೆಯನ್ನು ಅನುಭವಿಸಲಿವೆ. ಪ್ಯಾಕ್ಸ್ಗಳು ಸಂಕಷ್ಟವನ್ನು ಎದುರಿಸಬೇಕಾಗಬಹುದಾದ್ದರಿಂದ ಕೆಸಿಸಿ ರೂಪೇ ಖಾತೆಗೆ ಸಾಲದ ಮೊತ್ತವನ್ನು ಜಮಾ ಮಾಡುವ ಕ್ರಮವನ್ನು ಕಡ್ಡಾಯಗೊಳಿಸಕೂಡದೆಂದು, ಈ ಹಿಂದಿನ ಕ್ರಮವನ್ನೇ ಅನುಸರಿಸಿ ಸಾಲ ವಿತರಣೆ ಮಾಡುವ ಬಗ್ಗೆ ಸಹಕಾರ ಸಂಘಗಳಿಗೆ ಅವಕಾಶವನ್ನು ಕಲ್ಪಿಸಿಕೊಡುವಂತೆ ಕೋರಲಾಗಿದೆ. ಷರತ್ತು ಸಂಖ್ಯೆ (13)ರಲ್ಲಿ ಸಾಲ ನೀಡುವ ಸಂಸ್ಥೆಗಳು ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಂದ ಮತ್ತು ಪ್ರಾಥಮಿಕ ಸಹಕಾರಿ ಸಂಸ್ಥೆಗಳು ರೈತ ಸದಸ್ಯರಿಂದ ಯಾವುದೇ ಪ್ರಕ್ರಿಯಾ ಶುಲ್ಕ ಅಥವಾ ಸೇವಾ ಶುಲ್ಕ ಹೆಸರಿನಲ್ಲಿ ಯಾವುದೇ ಹಣವನ್ನು ಸಂಗ್ರಹಿಸತಕ್ಕದ್ದಲ್ಲ. ಸಹಕಾರ ಸಂಘಗಳು ನಡೆಸುತ್ತಿರುವ ವ್ಯವಹಾರದಲ್ಲಿನ ಅಲ್ಪ ಮಾರ್ಜಿನ್ನಿಂದ ಸಹಕಾರ ಸಂಘಗಳ ಆಡಳಿತ ವೆಚ್ಚ ಮತ್ತು ಸಿಬ್ಬಂದಿಗಳ ವೆಚ್ಚವನ್ನು ನಿಭಾಯಿಸಬೇಕಾಗಿದ್ದು, ಬೆಳೆ ಸಾಲಕ್ಕೆ ಸಂಬಂಧಿಸಿದ ಅರ್ಜಿ ಶುಲ್ಕ ಮತ್ತು ಕನಿಷ್ಟ ಸೇವಾ ಶುಲ್ಕವನ್ನು ಪಡೆಯಬೇಕಾಗುತ್ತದೆ. ಇದರಿಂದಾಗಿ ಈ ಷರತ್ತನ್ನು ಸಡಿಲಿಸುವಂತೆ ಕೋರಲಾಗಿದೆ.
ಇದಲ್ಲದೆ, ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕನಿಷ್ಟ 25 ವರ್ಷದಿಂದ ಗರಿಷ್ಠ 100 ವರ್ಷಗಳ ಹಳೆಯದಾದ ಸಹಕಾರ ಸಂಘಗಳಾಗಿದ್ದು, ಅಂದಿನಿಂದಲೂ ಸಂಘದ ವ್ಯಾಪ್ತಿಯ ರೈತರಿಗೆ ವಿವಿಧ ರೀತಿಯ ಸೇವೆಯನ್ನು ನೀಡುತ್ತಾ ಬಂದಿರುತ್ತದೆ. ಈ ಪೈಕಿ ಬೆಳೆ ಸಾಲದ ಯೋಜನೆಯು ಗರಿಷ್ಠ ಪ್ರಮಾಣದಲ್ಲಿದ್ದು, ಒಂದು ವೇಳೆ ರೈತರಿಗೆ ವಿತರಿಸಲಾಗುವ ಬೆಳೆ ಸಾಲವನ್ನು, ರೈತರು ಡಿಸಿಸಿ ಬ್ಯಾಂಕಿನಲ್ಲಿ ಹೊಂದಿರುವ ಕೆಸಿಸಿ ರೂಪೇ ಖಾತೆಗೆ ಜಮೆ ಮಾಡಿದಲ್ಲಿ, ರೈತರು ಡಿಸಿಸಿ ಬ್ಯಾಂಕಿನ ಶಾಖೆಗೆ ತೆರಳಿ ವ್ಯವಹಾರ ನಡೆಸಲು ತೊಂದರೆಯಾಗಲಿದೆ. ಹಾಲಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ರೂ. 3 ಲಕ್ಷಗಳವರೆಗಿನ ಬೆಳೆ ಸಾಲ ಯೋಜನೆಯು ಎಲ್ಲಾ ರೈತರಿಗೂ ಅನ್ವಯಿಸುತ್ತಿದ್ದು, ಸರ್ಕಾರದ ಷರತ್ತಿನಿಂದಾಗಿ ಅನರ್ಹತೆ ಉಂಟಾದಲ್ಲಿ, ಸಾಲ ಪಡೆದ ರೈತ ಹೆಚ್ಚುವರಿ ಬಡ್ಡಿ ದರದಲ್ಲಿ ಸಾಲ ಮರುಪಾವತಿಸಬೇಕಾದಲ್ಲಿ, ಪ್ರಾಥಮಿಕ ಹಂತದಲ್ಲಿನ ಸಾಲ ವಸೂಲಾತಿಗೆ ಧಕ್ಕೆ ಉಂಟಾಗುವುದಲ್ಲದೆ, ಪ್ರಾಥಮಿಕ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿಸುವಲ್ಲಿಯೂ ತೊಂದರೆಯಾಗಲಿದ್ದು, 3 ಹಂತಗಳ ಸಹಕಾರಿ ಪತ್ತಿನ ವ್ಯವಸ್ಥೆಯಡಿ ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿಯೂ ಏರುಪೇರಾಗಲಿದೆ.
ರಾಜ್ಯ ಸರ್ಕಾರದ ಆದೇಶದನ್ವಯ ಬಡ್ಡಿ ರಿಯಾಯಿತಿ ಕ್ಲೇಂ ಬಿಲ್ಲುಗಳನ್ನು ಆನ್ಲೈನ್ ತಂತ್ರಾಂಶದಲ್ಲಿ ಅಪ್ಲೋಡ್ ಮತ್ತು ಪರಿಶೀಲನೆಯನ್ನು ನಡೆಸಬೇಕೆಂದು ಸೂಚಿಸಿರುವ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿನ ಪ್ಯಾಕ್ಸ್ಗಳು ವಿವಿಧ ತರಹದ ಸಾಪ್ಟ್ವೇರ್ಗಳನ್ನು ಅಳವಡಿಸಿಕೊಂಡಿದ್ದು, ಬಡ್ಡಿ ರಿಯಾಯಿತಿ ಕ್ಲೇಂ ಬಿಲ್ಲುಗಳ ಪರಿಶೀಲನೆಗೆ ಪೂರ್ವಭಾವಿಯಾಗಿ ಪ್ಯಾಕ್ಸ್ ಹಂತದಲ್ಲಿ ಒಂದೇ ತರಹದ ಸಾಪ್ಟ್ವೇರ್ ಅಳವಡಿಸಿ ಪ್ಯಾಕ್ಸ್ಗಳನ್ನು ಡಿಸಿಸಿ ಬ್ಯಾಂಕಿನೊಂದಿಗೆ ಲಿಂಕ್ ಮಾಡಿದಲ್ಲಿ, ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನೊಂದಿಗೆ ನಡೆಸುವ ರೈತರ ಬೆಳೆ ಸಾಲದ ವ್ಯವಹಾರವನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಲಿರುವುದರಿಂದ ಈ ಬಗ್ಗೆ ಸರ್ಕಾರದ ಹಂತದಲ್ಲಿ ಶೀಘ್ರವಾಗಿ ಕ್ರಮವಹಿಸುವಂತೆ ಕೋರಲಾಗಿದೆ.
ತಾಂತ್ರಿಕ ದೋಷದಿಂದಾಗಿ ರೈತರು ನೈಜವಾಗಿ ಬೆಳೆಯುತ್ತಿರುವ ಬೆಳೆಯ ವಿವರ ಲಭ್ಯವಿಲ್ಲದ ಸಂದರ್ಭದಲ್ಲಿ ಕಂದಾಯ ಇಲಾಖೆಯಿಂದ ದೃಢೀಕರಣವನ್ನು ಪಡೆದು ಬೆಳೆ ಸಾಲ ವಿತರಣೆ ಮಾಡಲು ಅನುಕೂಲವನ್ನು ಕಲ್ಪಿಸಿಕೊಡುವಂತೆ ಕೋರಲಾಗಿದೆ.
ರಾಜ್ಯ ಸರ್ಕಾರವು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೈತರಿಗೆ ರೂ. 3 ಲಕ್ಷಗಳವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲ ವಿತರಣೆ ಯೋಜನೆಯಡಿ, ವಸೂಲಾತಿ ಆಧಾರದಲ್ಲಿ, ಶೇ. 6.80 ಬಡ್ಡಿ ಸಹಾಯಧನವನ್ನು ಒದಗಿಸುತ್ತಿದ್ದು, ರಾಜ್ಯದಲ್ಲಿನ ಪತ್ತಿನ ಸಹಕಾರ ಸಂಸ್ಥೆಗಳ ಮೂಲಕ ವಾರ್ಷಿಕ ಅಂದಾಜು ರೂ. 10000 ಕೋಟಿಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಣೆ ಮಾಡಿ, ನಿಗದಿತ ಅವಧಿಯಲ್ಲಿ ವಸೂಲಾಗುವುದೆಂದು ಅಂದಾಜಿಸಿದಲ್ಲ್ಲಿ, ಸರ್ಕಾರಕ್ಕೆ ಒಂದು ವರ್ಷದ ಅವಧಿಗೆ ಕೇವಲ ರೂ. 680 ಕೋಟಿಯಷ್ಟು ಮಾತ್ರ ಬಡ್ಡಿ ಸಹಾಯಧನದ ಹೊರೆ ಬೀಳಲಿರುವ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲಾಗಿದೆ.
ಒಟ್ಟಾರೆ, ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ, ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರೈತರ ಹಿತದೃಷ್ಟಿಯಿಂದ, ಸರ್ಕಾರಿ ಆದೇಶದಲ್ಲಿನ ಷರತ್ತುಗಳನ್ನು ಕೈಬಿಟ್ಟು 2019-20ನೇ ಸಾಲಿನ ಅಲ್ಪಾವಧಿ ಬೆಳೆ ಸಾಲ ವಿತರಣೆ ಹಾಗೂ ವಸೂಲಾತಿಗೆ ಸಂಬಂಧಿಸಿದಂತೆ ಪರಿಷ್ಕøತ ಆದೇಶವನ್ನು ಕೊಡಿಸಿಕೊಡುವ ಮುಖಾಂತರ ರೂ. 3 ಲಕ್ಷಗಳವರೆಗೆ ಬೆಳೆ ಸಾಲ ಪಡೆದ ಎಲ್ಲಾ ರೈತರಿಗೂ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ದೊರಕಿಸಿಕೊಡುವಂತೆಯೂ ಹಾಗೂ ಮುಂದಿನ ಸಾಲುಗಳಲ್ಲಿ ಸಾಲ ವಿತರಣೆಯನ್ನು ಯಥಾವತ್ತಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಪರವಾಗಿ ಕೋರಲಾಗಿದೆ.
ಸಹಕಾರ ಸಂಘಗಳ ಪದಾಧಿಕಾರಿಗಳು ಮೇಲ್ಕಂಡ ಅಂಶಗಳ ಹಿನ್ನೆಲೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜಿಲ್ಲೆಯ ರೈತರ ಮತ್ತು ಸಹಕಾರ ಸಂಘಗಳ ಹಿತದೃಷ್ಟಿಯಿಂದ, ಈಗಾಗಲೇ ಶೂನ್ಯ ಬಡ್ಡಿ ದರದಲ್ಲಿ 2019-20ನೇ ಸಾಲಿನಲ್ಲಿ ರೂ. 3 ಲಕ್ಷಗಳವರೆಗೆ ಬೆಳೆ ಸಾಲ ಪಡೆದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರವು ಒದಗಿಸಿಕೊಡಲಿರುವ ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯದ ಪ್ರಯೋಜನವನ್ನು ಕಲ್ಪಿಸಿಕೊಡಲು ಅನುಕೂಲವಾಗುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆದು, ಪರಿಷ್ಕøತ ಆದೇಶವನ್ನು ಹೊರಡಿಸುವ ಮುಖಾಂತರ ಅನುಕೂಲವನ್ನು ಕಲ್ಪಿಸಿಕೊಡಲು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಮತ್ತು ರೈತರ ಪರವಾಗಿ ಸರಕಾರವನ್ನು ಕೋರಲಾಗಿದೆ.