ಶ್ರೀಮಂಗಲ, ಏ. 10: ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇರಿಸಿರುವ ಕ್ಯಾಮರಾವನ್ನು ಹುಲಿ ಕಚ್ಚಿದ್ದು,ಕ್ಯಾಮರಾದ ಹೊರ ಕವಚದಲ್ಲಿ ಹಲ್ಲಿನ ಗುರುತು ಬಿದ್ದಿದ್ದು,ಕ್ಯಾಮರಾ ಹಾನಿಯಾಗಿದೆ.

ಗ್ರಾಮದ ರೈತ ಮಚ್ಚಮಾಡ ಭೀಮಯ್ಯ (ಬೊಳ್ಳಿಕಟ್ಟಿ) ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ 6 ತಿಂಗಳ ಗಬ್ಬದ ಹಸು ಮೇಲೆ ಮಂಗಳವಾರ ಮುಂಜಾನೆ ಹುಲಿ ದಾಳಿ ನಡೆಸಿತ್ತು.

ಈ ಹುಲಿಯ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಳ್ಳುವ ಮುನ್ನ ಅದರ ಚಲನ ವಲನ ಗಮನಿಸಲು ಡಿಜಿಟಲ್ ಕ್ಯಾಮರಾವನ್ನು ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಅಳವಡಿಸಿತ್ತು. ಈ ಕ್ಯಾಮರಾದಲ್ಲಿ ಹೆಬ್ಬುಲಿ ಚಿತ್ರ ಸೆರೆಯಾಗಿದೆ. ಮಂಗಳವಾರ ರಾತ್ರಿ ಹುಲಿ ಆಗಮಿಸಿ, ಹಸುವಿನ ಕಳೆಬರವನ್ನು ಸ್ವಲ್ಪ ದೂರ ಎಳೆದೊಯ್ದು ಭಾಗಶಃ ತಿಂದಿತ್ತು.

ಸ್ಥಳಕ್ಕೆ ಗುರುವಾರ ರಾತ್ರಿ ಆಗಮಿಸಿರುವ ಹುಲಿ, ಹುಲಿಯ ಚಿತ್ರ ಸೆರೆಗೆ ಇರಿಸಿದ್ದ 2 ಕ್ಯಾಮರಾದಲ್ಲಿ ಒಂದು ಕ್ಯಾಮರಾವನ್ನು ಕಚ್ಚಿದೆ. ಕಚ್ಚಿರುವುದರಿಂದ ಕ್ಯಾಮರಾದ ಹೊರ ಕವಚಕ್ಕೆ ಹಾನಿಯಾಗಿದ್ದು,ಹುಲಿಯ ಹಲ್ಲಿನ ಗುರುತು ಬಿದ್ದಿದೆ. ಅರಣ್ಯ ಇಲಾಖೆ ಹುಲಿ ಸೆರೆಗೆ ಬೋನ್ ಇರಿಸಿದ್ದು, ಗುರುವಾರ ರಾತ್ರಿ ಬೋನಿನ ಬಾಗಿಲು ಮುಚ್ಚಿಕೊಂಡಿದ್ದು,ಹುಲಿ ಸೆರೆಯಾಗಿಲ್ಲ. ಬೋನ್ ಇರಿಸಿರುವ ಸ್ವಲ್ಪ ದೂರದಲ್ಲಿ ಹುಲಿ ವಿರಮಿಸಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಅರಮಣಮಾಡ ತೀರ್ಥ ಮತ್ತು ಸಿಬ್ಬಂದಿ ವರ್ಗ ಆಗಮಿಸಿ ಹುಲಿಯ ಚಲನ ವಲನ ಗಮನಿಸುತ್ತಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ನೀಡಿ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹುಲಿ ಸೆರೆಗೆ ಕಾರ್ಯತಂತ್ರ ಕೈಗೊಂಡಿದ್ದಾರೆ.