ಮಡಿಕೇರಿ, ಏ. 10: ಕೊರೊನಾ ಭೀತಿಯ ನಡುವೆ ಯಾರೊಬ್ಬರೂ ಸಂಕಷ್ಟಕ್ಕೆ ಸಿಲುಕಿ; ಹಸಿವಿನಿಂದ ನರಳದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ; ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂಜಾಗ್ರತಾ ಕ್ರಮ ತೆಗೆದು ಕೊಂಡಿದೆ. ಇಂತಹ ಕುಟುಂಬಗಳನ್ನು ಗುರುತಿಸಿ ಪಡಿತರ ಪೂರೈಕೆಯೊಂದಿಗೆ ಉಚಿತ ಹಾಲು ವಿತರಣೆ ಮಾಡುತ್ತಿದೆ; ಈ ಸೌಲಭ್ಯದಲ್ಲಿ ದುರುಪಯೋಗ ತಡೆಗಟ್ಟಲು ನಿಗಾ ವಹಿಸಲಾಗುತ್ತಿದೆ ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.ಅಲ್ಲದೆ ಪಡಿತರ ಚೀಟಿ ಹೊಂದಿರುವ ಫಲಾನುಭವಿ ಗಳಿಗೆ ಇದುವರೆಗೆ ಶೇಕಡ 69ರಷ್ಟು ಮಾಸಿಕವಾಗಿ ಏಪ್ರಿಲ್ ಹಾಗೂ ಮೇ ತಿಂಗಳ ದಿನಸಿ ಪೂರೈಸಿದ್ದು, ಇನ್ನಷ್ಟು ಕಡೆಗಳಲ್ಲಿಯೂ ಪಡಿತರ ವಿತರಣೆ ಮುಂದುವರೆದಿದೆ ಎಂದು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ.ಕೊಡಗಿನಲ್ಲಿ ಈಗಿನ ಮಾಹಿತಿಯಂತೆ ಅಂದಾಜು 99 ಸಾವಿರ ಮಂದಿ ಬಿಪಿಎಲ್ ಚೀಟಿದಾರರಿದ್ದು, 23 ಸಾವಿರದಷ್ಟು ಮಂದಿ ಎಪಿಎಲ್ ಹಾಗೂ 10 ಸಾವಿರದಷ್ಟು ಅಂತ್ಯೋದಯ ಚೀಟಿದಾರರು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಗೌರವ್ ಕುಮಾರ್ ಶೆಟ್ಟಿ ಮಾಹಿತಿಯಿತ್ತರು.ಹಾಲು ಪೂರೈಕೆ : ಅಂತೆಯೇ ಕಡುಬಡವರಿಗಾಗಿ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕೂಡಿಗೆ ಡೈರಿ ಮೂಲಕ 2916 ಕುಟುಂಬಗಳಿಗೆ ಹಾಲು ನೀಡಲಾಗುತ್ತಿದ್ದು, ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 860 ಲೀಟರ್, ವೀರಾಜಪೇಟೆ 656 ಲೀ., ಸೋಮವಾರ ಪೇಟೆ ವ್ಯಾಪ್ತಿಯಲ್ಲಿ 715 ಹಾಗೂ ಕುಶಾಲನಗರ ಸುತ್ತಮುತ್ತ 685 ಕುಟುಂಬ ಪ್ರಯೋಜನ ಪಡೆಯುತ್ತಿದೆ ಎಂದರು.
ನೋಡಲ್ ಅಧಿಕಾರಿಗಳ ಮಾಹಿತಿ: ಯಾವುದೇ ಪಡಿತರ ಚೀಟಿ ಹೊಂದಿರದ ಜಿಲ್ಲೆಯ ಕೂಲಿ ಕಾರ್ಮಿಕ ಕುಟುಂಬಗಳನ್ನು ಗುರುತಿಸಲಾಗಿದೆ. ಈ ಕುಟುಂಬಗಳಿಗೆ ಆಹಾರದ ಕೊರತೆ ಉಂಟಾಗದಂತೆ ನಿಗಾ ವಹಿಸಿದ್ದು, ನೋಡಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಉಚಿತ ಆಹಾರ ಕಿಟ್ ಪೂರೈಸಲಾಗುತ್ತಿದೆ ಎಂದರು.
ಮಡಿಕೇರಿ ತಾಲೂಕು ನೋಡಲ್ ಅಧಿಕಾರಿ ರಾಜು ಅವರು, ‘ಶಕ್ತಿ’ಗೆ ಮಾಹಿತಿ ನೀಡಿ, ಯಾವುದೇ ದಾಖಲೆಗಳಿಲ್ಲದ 706 ಕುಟುಂಬಗಳನ್ನು ಗುರುತಿಸಿದೆ. ಆಹಾರ ಕಿಟ್ ಹಾಗೂ ಹಾಲು ಪೂರೈಕೆ ಕೈಗೊಳ್ಳಲಾಗಿದೆ ಎಂದು ವಿವರಣೆಯಿತ್ತರು.
ವೀರಾಜಪೇಟೆ ತಾಲೂಕು ನೋಡಲ್ ಅಧಿಕಾರಿ ಯಾಗಿರುವ ಡಾ. ತಮ್ಮಯ್ಯ ಪ್ರತಿಕ್ರಿಯಿಸಿ, 1647 ಕುಟುಂಬ ಗಳಿಗೆ ಆಹಾರ ಕಿಟ್ ನೀಡುತ್ತಿದ್ದು, ಸರಕಾರದ ಮಾರ್ಗ ಸೂಚಿಯಂತೆ ಉಚಿತ ಹಾಲು ಒದಗಿಸುತ್ತಿರುವುದಾಗಿ ತಿಳಿಸಿದರು.
ಸೋಮವಾರಪೇಟೆ ತಾಲೂಕು ನೋಡಲ್ ಅಧಿಕಾರಿ ಭಾರತಿ ಅವರು, ಈ ತಾಲೂಕಿನಲ್ಲಿ 1521 ಕುಟುಂಬಗಳಿಗೆ ಪಡಿತರ ಒದಗಿಸಲಾಗಿದೆ ಎಂದರಲ್ಲದೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಕಾಯ್ದಿರಿಸಿರುವ ಪಡಿತರ ವಸ್ತುಗಳು ಕೆಡದಂತೆ ಈ ವೇಳೆ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನೆನಪಿಸಿದರು.
ಒಟ್ಟಿನಲ್ಲಿ ನೈಜ ಫಲಾನುಭವಿಗಳು ಸಂಬಂಧಿಸಿದ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿ ಸರಕಾರಿ ಸೌಲಭ್ಯ ಹೊಂದಿಕೊಳ್ಳುವಂತೆ ಈ ಅಧಿಕಾರಿಗಳು ಸಲಹೆ ನೀಡಿದ್ದಾರೆ.