(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಏ.9 : ದೇಶದಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಯಾರೂ ಕೂಡ ಮನೆಯಿಂದ ಹೊರ ಬಾರದೆಂಬ ನಿಯಮವಿದೆ. ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತೀ ಸಣ್ಣ ರೈತರನ್ನು ನಂಬಿರುವ ಸಾವಿರಾರು ಕಾರ್ಮಿಕರ ಜೀವನ ನಾವಿಕನಿಲ್ಲದ ದೋಣಿಯಂತಾಗಿದೆ. ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿ ಗುರುತಿಸಿಕೊಂಡಿರುವ ಕಾರ್ಮಿಕರ ಸಮಸ್ಯೆ ಒಂದಾದರೆ, ಮೂರು,ನಾಲ್ಕು, ಏಕರೆಗಳಲ್ಲಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವ ಅತೀ ಸಣ್ಣ ರೈತರಲ್ಲಿರುವ ಒಂದು,ಎರಡು ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಡೋಲಾಯಮಾನ ಪರಿಸ್ಥಿತಿಗೆ ಬಂದು ತಲುಪಿದೆ.
ಪ್ರಸ್ತುತ ಜಿಲ್ಲಾಡಳಿತ ಆಹಾರ ಇಲಾಖೆಯ ಮೂಲಕ ನೀಡುತ್ತಿರುವ ಪಡಿತರ ಚೀಟಿಯ ಅಕ್ಕಿ ವಿತರಣೆಯಲ್ಲಿ ಕೇವಲ ಅಕ್ಕಿ ಹಾಗೂ ಎರಡು ಕೆ.ಜಿ. ಗೋದಿ ಹೊರತುಪಡಿಸಿ ಮತ್ಯಾವ ಸಾಮಗ್ರಿಗಳು ಈ ಕಾರ್ಮಿಕನಿಗೆ ಲಭ್ಯವಾಗುತ್ತಿಲ್ಲ. ಒಂದು ವೇಳೆ ಸಣ್ಣ ರೈತ ಇಂತಹ ಕಾರ್ಮಿಕರಿಗೆ ಕೆಲಸ ನೀಡಬೇಕೆಂಬ ಮನಸ್ಸು ಮಾಡಿದರೂ ಪ್ರಸ್ತುತ ಕೊರೊನಾ ವೈರಸ್‍ನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸ್ಥಿತಿಯಲ್ಲಿ ಕೆಲಸಗಳ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ. ಅದ್ದರಿಂದ ಸಣ್ಣ ರೈತ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾನೆ. ತನ್ನನ್ನೇ ನಂಬಿರುವ ಕಾರ್ಮಿಕರ ಕುಟುಂಬಕ್ಕೆ ಸಹಾಯ ಮಾಡಲಾರದ ಪರಿಸ್ಥಿತಿಗೆ ತಲುಪಿದ್ದಾನೆ. ಅತೀ ಸಣ್ಣ ರೈತ ತಾನು ಬೆಳೆದಿರುವ ಅಲ್ಪ ಪ್ರಮಾಣದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿಯಲ್ಲಿ ಸದ್ಯಕ್ಕಂತು ಕಂಡು ಬರುತ್ತಿಲ್ಲ. ಮಾರಾಟ ಮಾಡಿದರೂ ಉತ್ತಮ ಬೆಲೆ ಸಿಗುತ್ತಿಲ್ಲ. ಇದರಿಂದ ಅತೀ ಸಣ್ಣ ರೈತನ ಬದುಕು ಕೂಡ ಶೋಚನೀಯವಾಗಿದೆ.
ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ಇರುವ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಹೋರಾಟಗಾರರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೇ ಇರುವುದು ದುರಂತ. ಸಣ್ಣ ರೈತರು ಕಾರ್ಮಿಕರನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವುದಕ್ಕೂ ಇಂತಹ ಸಂದರ್ಭದಲ್ಲಿ ಸಾಧ್ಯವಾಗುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದೀಗ ಇಂತಹ ಅತೀ ಸಣ್ಣ ರೈತನಲ್ಲಿ ಕೂಲಿ ಮಾಡುತ್ತಿರುವ ಕಾರ್ಮಿಕನ ಸಹಾಯಕ್ಕೆ ನಿಲ್ಲಬೇಕಾಗಿದೆ. ಸರ್ಕಾರ ಇಂತಹ ಕಾರ್ಮಿಕರನ್ನು ಗುರುತಿಸಬೇಕಾಗಿದೆ. ಇದೀಗ ಹೋರಾಟಗಾರರು ಸರ್ಕಾರದ ವಿರುದ್ದ ಸಂಘರ್ಷಕ್ಕೆ ಇಳಿಯುವ ಸಮಯವಲ್ಲ. ಬದಲಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇಲ್ಲಿಯ ಕಾರ್ಮಿಕನ ದಿನನಿತ್ಯದ ಬದುಕನ್ನು ತಿಳಿಸಬೇಕಾದ ಅನಿವಾರ್ಯತೆ ಮುಂದಿದೆ. ವಾರದ ಮೂರು ದಿನದ ಕನಿಷ್ಟ ಕೂಲಿಯ ಹಣವನ್ನು ಸಂಘಟಿತ ಹಾಗೂ ಅಸಂಘಟಿತ ವಲಯವಲ್ಲದ ಇಂತಹ ಅತೀ ಸಣ್ಣ ರೈತರನ್ನು ನಂಬಿರುವ ಕಾರ್ಮಿಕರಿಗೆ ಸರ್ಕಾರ ಮಂಜೂರು ಮಾಡಬೇಕಾಗಿದೆ. ಇದರಿಂದ ರೈತನ ಬದುಕಿಗೆ ಕೊಂಚ ಅನುಕೂಲವಾಗಲಿದೆ.