*ತಿತಿಮತಿ, ಏ. 9: ತಾ. 10 ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಇಲ್ಲಿನ ಕರಡಿಕೊಪ್ಪದ ಶ್ರೀ ಮುತ್ತಪ್ಪ ಹಾಗೂ ಪರಿವಾರ ದೈವಗಳ ವಾರ್ಷಿಕ ಮಹೋತ್ಸವನ್ನು ಕೊರೊನಾ ಹಿನ್ನೆಲೆ ಮುಂದೂಡಲಾಗಿದೆ.
ಲಾಕ್‍ಡೌನ್ ಸಡಿಲಿಕೆ ನಂತರ ವಾರ್ಷಿಕೋತ್ಸವ ಆಚರಣೆಯನ್ನು ನಡೆಸಲು ಸಮಯ ನಿಗದಿ ಮಾಡಲಾಗುವುದು ಎಂದು ಶ್ರೀ ಮುತ್ತಪ್ಪ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.
ಕಟ್ಟಡ ಕಾಮಗಾರಿಗೆ ಆಕ್ಷೇಪ
ವೀರಾಜಪೇಟೆ, ಏ. 9: ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಪವಿತ್ರವಾದ ಗೌರಿಕೆರೆಯ ಪಕ್ಕದಲ್ಲಿ ಸಮುದಾಯ ಭವನದ ಹೆಸರಿನಲ್ಲಿ ಪಟ್ಟಣ ಪಂಚಾಯಿತಿ ಕಟ್ಟಡವೊಂದನ್ನು ಕಟ್ಟಲು ಯೋಜನೆಯೊಂದನ್ನು ರೂಪಿಸಿ ಕಾಮಗಾರಿಯನ್ನು ಆರಂಭಿಸಿರುವುದಕ್ಕೆ ಇಲ್ಲಿನ ಧಾರ್ಮಿಕ ಮುಖಂಡರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ವಕೀಲ ಎನ್. ರವೀಂದ್ರನಾಥ್ ಕಾಮತ್ ತಿಳಿಸಿದ್ದಾರೆ.
ಪುರಾತನ ಕಾಲದಿಂದಲೂ ಹಿಂದೂ ಸಮುದಾಯದ ಪೂಜೆ ಪುನಸ್ಕಾರÀ, ಧಾರ್ಮಿಕ ಕಾರ್ಯಗಳಿಗೆ ವಿಶೇಷವಾಗಿ ಗೌರಿಗಣೇಶನ ಉತ್ಸವ ಸಮಯದಲ್ಲಿ ಎಲ್ಲ ರೀತಿಯ ಸಾಂಪ್ರದಾಯಿಕ ಪೂಜೆಗಳು ಗೌರಿಗಣೇಶನ ಅದ್ಧೂರಿಯ ವಿಸರ್ಜನೋತ್ಸವಕ್ಕೆ ಈ ಪವಿತ್ರವಾದ ಗೌರಿಕೆರೆ ಬಳಕೆಯಾಗುತ್ತಿತ್ತು. ಇದರೊಂದಿಗೆ ಇಲ್ಲಿನ ತೆಲುಗರಬೀದಿಯಲ್ಲಿರುವ ಅಂಗಾಳ ಪರಮೇಶ್ವರಿ, ಮಾರಿಯಮ್ಮ ದೇವಾಲಯಗಳ ಕರಗ ಉತ್ಸವ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳಿಗೂ ಇದು ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗುತ್ತಿತ್ತು. ಇದರ ಅರಿವಿಲ್ಲದ ಪಟ್ಟಣ ಪಂಚಾಯಿತಿ ಧಾರ್ಮಿಕ ಮುಖಂಡರ, ಸಾರ್ವಜನಿಕರ ಅಭಿಪ್ರಾಯ ಸಲಹೆ ಪಡೆಯದೆ ಏಕ ಪಕ್ಷೀಯವಾಗಿ ಕಾಮಗಾರಿಗೆ ಚಾಲನೆ ನೀಡಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಲಾಕ್‍ಡೌನ್ ನಿರ್ಬಂಧವಿರುವಾಗಲೂ ಸರಕಾರ ಯಾವುದೇ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳದೆ ಸ್ಥಗಿತಗೊಳಿಸುವ ಆದೇಶವಿದ್ದರೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತರಾತುರಿಯಲ್ಲಿ, ಕಾಮಗಾರಿಯತ್ತ ಗಮನ ಹರಿಸುತ್ತಿದ್ದಾರೆ. ಈ ವಿಷಯದಲ್ಲಿ ಆಡಳಿತಾಧಿಕಾರಿಗೂ ತಪ್ಪು ತಿಳುವಳಿಕೆ ನೀಡಲಾಗಿದೆ. ಈ ಸಂಬಂಧ ಇಲಾಖೆಯ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ. ಕಾಮಗಾರಿ ಸ್ಥಗಿತಗೊಳಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವದಾಗಿ ರವೀಂದ್ರನಾಥ್ ತಿಳಿಸಿದ್ದಾರೆ.