ಕೂಡಿಗೆ, ಏ. 9: ಕುಶಾಲನಗರ ಹೋಬಳಿ ವ್ಯಾಪ್ತಿಯ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರು ತಮ್ಮ ಪಡಿತರ ವಸ್ತು ಗಳನ್ನು ಪಡೆಯಲು ಮುಂದಾದರೆ ಬಿಪಿಎಲ್ ಹೊಂದಿರುವವರ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ಆಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪಡಿತರ ವಸ್ತುಗಳ ಪೂರೈಕೆ ಕಡಿತಕೊಂಡ ಕಾರಣ ಪಡಿತರ ಕಾರ್ಡ್‍ದಾರರು ವಸ್ತುಗಳಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಕೂಡಿಗೆ ತೊರೆನೂರು ಸೇರಿದಂತೆ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ಏಕಾಏಕಿ ಬದಲಾವಣೆ ಆಗಿರುವುದರಿಂದ ಪಡಿತರ ವಸ್ತುಗಳು ಇಲ್ಲದೆ ಇಲಾಖೆ ವಿರುದ್ಧ ಗ್ರಾಹಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇವಲ 460 ಪಡಿತರ ಚೀಟಿ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ 50 ಕ್ಕೂ ಹೆಚ್ಚು ಜನರ ಕಾರ್ಡ್ ಬದಲಾವಣೆಯಾಗಿರುವುದರಿಂದ ತುಂಬಾ ತೊಂದರೆಯಾಗಿದೆ ಎಂದು ಅರ್ಹರಾಗಿರುವ ಬಡ ಕಾರ್ಮಿಕರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.