ಕಣಿವೆ, ಏ. 9: ಕೊರೊನಾ ಎಂಬ ಮಾರಣಾಂತಿಕ ವೈರಸ್ ಇದೀಗ ಎಲ್ಲೆಲ್ಲೂ ಪೆಡಂಭೂತವಾಗಿ ಕಾಡುತ್ತಿದ್ದು, ಎಲ್ಲೆಲ್ಲೂ ಹಾಗೂ ಎಲ್ಲರಲ್ಲೂ ಒಂದು ರೀತಿಯ ಭಯಮಿಶ್ರಿತ ಕಂಪನವನ್ನು ಉಂಟು ಮಾಡಿದೆ. ಆದರೆ ಪಟ್ಟಣ, ನಗರ ಪ್ರದೇಶಗಳ ಸ್ವಚ್ಛತಾ ಸೇನಾನಿಗಳು ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ನಿತ್ಯ ತೊಡಗಿಸಿಕೊಂಡಿದ್ದಾರೆ.
ಈ ಕಾಯಕ ಯೋಗಿಗಳು ಏನಾದರೂ ಕೊರೊನಾಕ್ಕೆ ಇತರ ಸಾಮಾನ್ಯ ಜನರಂತೆ ಹೆದರಿ ಗುಡಿಸುವ ಕಸಬುರುಕೆ ಸಾಮಗ್ರಿಗಳನ್ನು ಹಿಡಿಯದೇ ಮನೆಯಲ್ಲೇ ಕುಳಿತರೇ ಮುಂದಾಗುವ ಪರಿಣಾಮಗಳನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಕೊರೊನಾ ಎಂಬ ಪೀಡೆ ನಮ್ಮ ಜಿಲ್ಲೆಗೂ ಕಾಲಿಟ್ಟ ನಂತರ ಪಂಚಾಯಿತಿಗಳು ಸ್ವಚ್ಛತೆಗೆ ಮತ್ತಷ್ಟು ಒತ್ತು ಕೊಟ್ಟವು. ವರ್ಷಕ್ಕೊಮ್ಮೆ ಬ್ಲೀಚಿಂಗ್ ಪೌಡರ್ ಕಾಣುತ್ತಿದ್ದ ಚರಂಡಿಗಳು ಇದೀಗ ವಾರಕ್ಕೊಮ್ಮೆ ಕಾಣುತ್ತಿವೆ. ಈ ಹಿಂದೆ ಯಾವಾಗಲೂ ರಸ್ತೆ ಮತ್ತು ಬೀದಿ ಗಳು ಕಂಡೇ ಇರದ ಸ್ಯಾನಿಟೈಸರ್ ಗಳನ್ನು ಜನ ಕಾಣುವಂತಾಯಿತು. ಅಷ್ಟರಮಟ್ಟಿಗೆ ಕೊರೊನಾ ಎಂಬ ಹೆಮ್ಮಾರಿ ಆಳುವವರ ಕಣ್ತೆರೆಸಿ, ರೋಗಕ್ಕೆ ಹೆದರಿ ಅಳುವವರಿಗೆ ಒಂದಷ್ಟು ಸಾಂತ್ವನ ಹೇಳುವಂತೆ ಮಾಡಿತು. ಕೊರೊನಾ ಸೋಂಕಿತರು ನಮ್ಮ ನಡುವೆಯೂ ಇರಬಹುದು. ಈಗಾಗಲೇ ಜಿಲ್ಲೆಯ ವಿವಿಧೆಡೆಗಳ ನಗರ ಪಟ್ಟಣ ಪ್ರದೇಶಗಳಲ್ಲೂ ಇದ್ದಾರೆ. ಅಂತಹವರನ್ನು ಜಿಲ್ಲಾಡಳಿತ ಗುರುತಿಸಿ ಹೋಮ್ ಕ್ವಾರಂಟೈನ್ಗೆ ಒಳಪಡಿಸಿದೆ. ಇದೀಗ ಪುಣ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಇಲ್ಲ. ಆದಾಗ್ಯೂ ಕೆಲವರನ್ನು ಸೋಂಕಿ ತರೆಂದು ಅನುಮಾನಿಸಿ ಅಂದಾಜಿಸಿರುವ ಮನೆಗಳ ಬಳಿ ಇದೇ ಸ್ವಚ್ಛತಾ ಸೇನಾನಿಗಳೆಂಬ ಪೌರ ಕಾರ್ಮಿಕರು ತೆರಳಲೇ ಬೇಕಲ್ಲವೆ. ತೆರಳಿ ಅಲ್ಲಿನ ರಸ್ತೆ, ಚರಂಡಿ ಗುಡಿಸಿ ಸ್ವಚ್ಛಗೊಳಿಸಲೇ ಬೇಕಲ್ಲವೆ. ಒಂದು ವೇಳೆ ಯಾರಾದರೂ ಸೋಂಕಿತರು ಉಗುಳಿದರೆ ಅಥವಾ ಉಸುರಿದರೆ ಅದನ್ನು ಈ ಸೇನಾನಿಗಳು ವಿಧಿ ಇಲ್ಲದೇ ಸ್ವಚ್ಛಗೊಳಿಸಲೇ ಬೇಕಲ್ಲವೇ? ಸಾಮಾನ್ಯ ಆರೋಗ್ಯವಂತ ಮನುಷ್ಯರಾದ ನಾವುಗಳು ಈ ಕೊರೊನಾ ಸಂಬಂಧಿತ ಸೋಂಕಿತರು ನೆಲೆಸಿರುವ ಬೀದಿಗಳಿಗೆ ಹೋಗಲು ಹಿಂದೇಟು ಹಾಕುತ್ತೇವೆ. ಆ ಸೋಂಕಿತ ಮಂದಿ ಏನಾದರೂ ಎದುರು ಸಿಕ್ಕರೆ ಇನ್ನೇನು ನಮಗೂ ಸೋಂಕು ಬಂದೇ ಬಿಟ್ಟಿತೋ ಏನೋ ಅಂದುಕೊಂಡು ಅವರಿಂದ ಕ್ಷಣಾರ್ಧದಲ್ಲಿ ಮರೆಯಾಗುತ್ತೇವೆ. ಆದರೆ ಈ ಸ್ವಚ್ಛತಾ ಸೇನಾನಿಗಳು ತಮ್ಮ ಕಾಯಕವನ್ನು ತಾವು ಶಿರಸಾವಹಿಸಿ ಪಾಲಿಸಲೇ ಬೇಕಲ್ಲವೇ. ಇಲ್ಲಿ ಈ ಒಂದು ವಿಚಾರದಲ್ಲಿ ಈ ಸ್ವಚ್ಛತಾ ಸೇನಾನಿಗಳು ವೈದ್ಯ ಸಿಬ್ಬಂದಿಗಳಿಗಿಂತಲೂ ಒಂದು ಹಂತದಲ್ಲಿ ಮೇಲುಸ್ತರದಲ್ಲಿ ನಿಲ್ಲುತ್ತಾರೆ. ಏಕೆಂದರೆ ಈ ಸ್ವಚ್ಛತಾ ಸೇನಾನಿ ಮೊದಲು ಆ ಬೀದಿ, ಆ ವಠಾರ, ಅಲ್ಲಿನ ಚರಂಡಿ ಗುಡಿಸಿ ಬ್ಲೀಚಿಂಗ್ ಹಾಕಿದ ಬಳಿಕವಷ್ಟೇ ಇನ್ನುಳಿದವರು ಅಲ್ಲಿ ತೆರಳೋದು. ಸ್ವಚ್ಛತೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರು ನಮ್ಮಂತೆಯೇ ಮನುಷ್ಯರು ಎಂಬ ಮಾನವೀಯ ನೆಲೆಯಲ್ಲಿ ಕಾಣಬೇಕಿದೆ. ಅವರ ಸೇವೆಯನ್ನು ನಾವು ಮೊದಲು ಗೌರವಿಸಬೇಕಿದೆ. ಕಾಲ ಬದಲಾಗಿದೆ. ಈ ಧರೆಯ ಮೇಲಿನ ಅದು ಎಂತೆಂತಹ ದೊರೆಗಳನ್ನು ಕೂಡ, ಕಣ್ಣಿಗೆ ಕಾಣದಂತಹ ಆ ಒಂದು ವೈರಸ್ ಕಟ್ಟಿ ಹಾಕಿದೆ. ದೇವರು ಧರ್ಮಗಳು ಶಾಲಾ ಕಾಲೇಜುಗಳನ್ನು ಕೂಡ ಆ ಮಾರಕ ವೈರಸ್ ರಜೆಯ ಮೇಲೆ ಬಾಗಿಲು ಹಚ್ಚಿಸಿದೆ. ಅಂದರೆ ಅಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಜನರ ಜೀವವನ್ನು ಕೊಲ್ಲಲೆಂದೇ ಬಂದ ಕೊರೊನಾದ ಅಟ್ಟಹಾಸಕ್ಕೆ ಇಟಲಿ ದೇಶ ಬಹಳಷ್ಟು ಬೆಲೆ ತೆತ್ತಿದೆ.
ಆದ್ದರಿಂದ ಪೌರ ಕಾರ್ಮಿಕರನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಿ ಗೌರವಿಸೋಣ. ಪಟ್ಟಣದ ಜನವಸತಿ ಬೀದಿ ಹಾಗೂ ಚರಂಡಿಗಳ ಸ್ವಚ್ಛತೆಗೆ ಆ ಮಂದಿ ಬಂದಾಗ ಅವರನ್ನು ಗೌರವದಿಂದ ಕಂಡು ಮಾತಾಡಿಸೋಣ. ಅವರಿಗೆ ಸೌಜನ್ಯಕ್ಕಾದರೂ ಒಂದು ಕಪ್ ಕಾಫಿ ಕೊಟ್ಟು ಮನೆಯಂಗಳದಲ್ಲಿ ಕುಳ್ಳಿರಿಸಿ ಸತ್ಕರಿಸೋಣ. ಸ್ವಚ್ಛತೆಯಲ್ಲಿ ನಮ್ಮದೂ ಒಂದು ಪಾಲು ಇರುವ ಹಾಗೆ ಒಣ ಕಸ - ಹಸಿ ಕಸ ಪ್ರತ್ಯೇಕ ಬೇರ್ಪಡಿಸಿ ಪಂಚಾಯಿತಿಯೊಂದಿಗೆ ಸಹಕರಿ ಸೋಣ. ನಮ್ಮ ನಮ್ಮ ಮನೆಯಂಗಳ ಗಳನ್ನು ನಾವೇ ಸ್ವಚ್ಛ ಮಾಡಿ ಕೊಳ್ಳೋಣ. ಸ್ವಚ್ಛತೆ ಇರುವಲ್ಲಿ ಆರೋಗ್ಯ ಎಂಬುದನ್ನು ಪಾಲಿಸೋಣ. ಕೊರೊನಾ ಮಾತ್ರವಲ್ಲ ಯಾವುದೇ ಸಾಂಕ್ರಾಮಿಕ ಕ್ರಿಮಿಗಳಿಗೂ ನಮ್ಮ ನಮ್ಮ ಮನೆ ಯಂಗಳಗಳಲ್ಲಿ ಜಾಗ ಕಲ್ಪಿಸದಂತೆ ಸದಾ ಸ್ವಚ್ಛಂದವಾಗಿಡೋಣ.
- ಮೂರ್ತಿ