ಮಡಿಕೇರಿ, ಏ. 8: ಪ್ರಸ್ತುತದ ಕೊರೊನಾ ಆತಂಕ... ಲಾಕ್‍ಡೌನ್ ಪರಿಸ್ಥಿತಿಯಿಂದಾಗಿ ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ. 5ರ ರಿಯಾಯಿತಿಯ ಕಾಲಾವಧಿಯನ್ನು ಇದೀಗ ಮೇ 31ರ ವರೆಗೆ ವಿಸ್ತರಿಸಿ ರಾಜ್ಯ ಪೌರಾಡಳಿತ ನಿರ್ದೇಶನ ಆದೇಶ ಹೊರಡಿಸಿದೆ.ಪ್ರತಿ ಸಾಲಿನಂತೆ ಪೌರಸಭೆಗಳ ಕಾಯ್ದೆಯನ್ವಯ ಆರ್ಥಿಕ ವರ್ಷದ ಆರಂಭದಲ್ಲೇ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಭರಿಸಬೇಕಾಗಿರುತ್ತದೆ ಮತ್ತು ಆರ್ಥಿಕ ವರ್ಷದ ಮೊದಲನೇ ತಿಂಗಳಿನಲ್ಲಿ (ಏಪ್ರಿಲ್ 30 ರೊಳಗೆ) ಆಸ್ತಿ ತೆರಿಗೆ ಸಂದಾಯ ಮಾಡುವ ನಾಗರಿಕರಿಗೆ ಉಲ್ಲೇಖ (2) ಮತ್ತು (3) ರಂತೆ ಶೇ. 5ರ ರಿಯಾಯಿತಿಯ ಸೌಲಭ್ಯ ಲಭ್ಯವಿರುತ್ತದೆ.ಈ ಹಿನ್ನೆಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಆಸ್ತಿ ತೆರಿಗೆ ಸಂದಾಯ ಮಾಡಲು ಹೆಚ್ಚಿನ ಜನಸಂದಣಿಯಾಗಲಿದ್ದು, ಪ್ರಸ್ತುತ ಸಂದರ್ಭಕ್ಕೆ ಅನಪೇಕ್ಷಿತವಾಗಿದೆ. ಹಾಗಾಗಿ ಸಾರ್ವಜನಿಕರು ಏಪ್ರಿಲ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ, ಬ್ಯಾಂಕ್‍ಗಳಿಗೆ ದೌಡಾಯಿಸುವುದನ್ನು ಮಿತಿಗೊಳಿಸಲು ಅನುವಾಗುವಂತೆ ಆಸ್ತಿ ತೆರಿಗೆ ಮೇಲಿನ ಶೇ. 5ರ ರಿಯಾಯಿತಿಯ ಕಾಲಾವಧಿಯನ್ನು ಇದೀಗ 31 ಮೇ 2020ರ ವರೆಗೆ ವಿಸ್ತರಿಸುವುದು ಅತ್ಯಗತ್ಯ ಮತ್ತು ಸಮಯೋಚಿತವಾಗಿರುತ್ತದೆ ಎಂದು ಅಭಿಪ್ರಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ ಹೊರತುಪಡಿಸಿ) ಆರ್ಥಿಕ ವರ್ಷ 2020-21ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಆಸ್ತಿ ತೆರಿಗೆ ಮೇಲಿನ ಶೇ. 5ರ ರಿಯಾಯಿತಿಯ ಸೌಲಭ್ಯದ ಕಾಲಾವಧಿಯನ್ನು 1 ಏಪ್ರಿಲ್ 2020 ರಿಂದ 31 ಮೇ 2020ರ ವರೆಗೆ ವಿಸ್ತರಿಸಿ ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಅನುವು ಮಾಡಿಕೊಡಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.