ಮಡಿಕೇರಿ, ಏ. 8: ಲಾಕ್‍ಡೌನ್ ನಡುವೆಯೂ ಪ್ರತಿನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ನಗರ ವ್ಯಾಪ್ತಿಯ ಪತ್ರಕರ್ತರು, ಮಾಧ್ಯಮದವರು ಹಾಗೂ ಕಚೇರಿ ಸಿಬ್ಬಂದಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಹಾರ ಕಿಟ್ ವಿತರಣೆ ಮಾಡಿದರು.

ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 85 ಮಂದಿಗೆ ಶಾಸಕರು ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೊರೊನಾವನ್ನು ವಿಶ್ವದಿಂದಲೇ ಹೊಡೆದೋಡಿಸಬೇಕಿದೆ. ‘ಸರ್ವೇಜನ ಸುಖಿನೋ ಭವಂತು’ ಎಂಬದು ನಮ್ಮ ಭಾರತೀಯ ಸಂಸ್ಕøತಿಯಲ್ಲಡಗಿದೆ.

ಕೊಡಗಿನಲ್ಲಿ ಎಲ್ಲರ ಸಹಕಾರ ದಿಂದಾಗಿ ಕೊರೊನಾ ಹತೋಟಿಗೆ ಬಂದಿದೆ. ಇದಕ್ಕೆ ಕಾರಣಕರ್ತರಾದ ವರೆಲ್ಲರಿಗೂ ಅಭಿನಂದನೆ ಸಲ್ಲಿಸಬೇಕೆಂಬ ಪ್ರಧಾನಿಯವರ ಆದೇಶದಂತೆ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಪತ್ರಕರ್ತರ ಸಂಘಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು. ಪತ್ರಕರ್ತರು ಕಷ್ಟದಲ್ಲಿದ್ದಾರೆ. ಬಹಳಷ್ಟು ಪತ್ರಿಕೆಗಳು ಸ್ಥಗಿತಗೊಂಡಿವೆ. ಕಷ್ಟವನ್ನರಿತು ಅಳಿಲು ಸೇವೆಯಂತೆ ಸಹಾಯ ಮಾಡುತ್ತಿರುವುದಾಗಿ ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರ ನೋವು, ಕಷ್ಟಗಳನ್ನು ಕೇಳುವವರು ಯಾರೂ ಇಲ್ಲ; ಸ್ಪಂದಿಸುವವರೂ ವಿರಳ. ಕೇವಲ ಸುದ್ದಿಗಳಿಗಾಗಿ ಮಾತ್ರ ಪತ್ರಕರ್ತರನ್ನು ಅವಲಂಬಿಸುತ್ತಾರೆ. ಹೀಗಿರುವಾಗ ಶಾಸಕರು ತಾವಾಗಿಯೇ ನೆರವಿಗೆ ಬಂದಿದ್ದು, ಸಂತಸವಾಗಿದೆ ಎಂದರು.

ಜಿಲ್ಲೆಯಲ್ಲಿ 165 ಮಂದಿ ಪತ್ರಕರ್ತರು ಒತ್ತಡದಿಂದ ಕೆಲಸ ಮಾಡುತ್ತಿದ್ದು, ಎಲ್ಲರಿಗೂ ಇದೇ ರೀತಿಯ ಸಹಕಾರ ಸಿಗುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ಮಾಜಿ ಕಾರ್ಯದರ್ಶಿ ವಿ.ಕೆ. ಲೋಕೇಶ್, ಪ್ರೆಸ್‍ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಇದ್ದರು. ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರ್ವಹಿಸಿದರು.