ನಾಪೆÇೀಕ್ಲು, ಏ. 7: ನಿರಂತರ ವಿದ್ಯುತ್ ಸಮಸ್ಯೆಯಿಂದ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮ ಕತ್ತಲೆಯಿಂದ ಆವರಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೋಕೇರಿ ಗ್ರಾಮ ಸೇರಿದಂತೆ ಸಮೀಪದ ಮರಂದೋಡ, ಚೆಯ್ಯಂಡಾಣೆ ಗ್ರಾಮಗಳಲ್ಲಿ ಕೆಲವು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. 24 ಗಂಟೆಗಳಲ್ಲಿ 3-4 ಗಂಟೆಗಳು ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಈ ಬಗ್ಗೆ ಮೂರ್ನಾಡು ಚೆಸ್ಕಾಂ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಡಿಕೇರಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಸೋಮಶೇಖರ್ ಅವರಿಗೆ ಕರೆ ಮಾಡುವಂತೆ ತಿಳಿಸುತ್ತಾರೆ ಎಂದು ಆರೋಪಿಸಿದರು. ಈಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲರೂ ಮನೆಯ ಒಳಗಡೆಯೇ ಇದ್ದಾರೆ. ಅವರಿಗೆ ಹೊರ ಪ್ರಪಂಚದ ಆಗುಹೋಗುಗಳ ಬಗ್ಗೆಯೂ ಕೂಡ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಇಲ್ಲಿ ಒಬ್ಬನೇ ಲೈನ್‍ಮೆನ್ ಕೆಲಸ ನಿರ್ವಹಿಸುತ್ತಿದ್ದು, ಆತನಿಂದ ದುರಸ್ತಿ ಕೆಲಸ ಸಾಧ್ಯವಾಗುತ್ತಿಲ್ಲ. ಆದುದರಿಂದ ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಗಮನಹರಿಸಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ‘ಶಕ್ತಿ’ಯ ಮೂಲಕ ಕೋರಿದ್ದಾರೆ.