ಶನಿವಾರಸಂತೆ, ಏ. 7: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ನ್ಯಾಯಬೆಲೆ ಅಂಗಡಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಏಪ್ರಿಲ್ - ಮೇ ತಿಂಗಳ ಪಡಿತರ ಆಹಾರ ಅಕ್ಕಿ ಹಾಗೂ ಗೋಧಿ ವಿತರಣೆ ನಡೆಯಿತು. ಕೊರೊನಾ ಲಾಕ್‍ಡೌನ್ ಹಿನ್ನೆಲೆ ಜಿಲ್ಲಾಡಳಿತ ಮನೆಯಿಂದ ಹೊರಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶಿಸಿದ್ದರೂ ನ್ಯಾಯಬೆಲೆ ಅಂಗಡಿ ಮುಂಭಾಗ ನೂರಾರು ಮಂದಿ ಬಿಪಿಎಲ್ ಕಾರ್ಡ್‍ದಾರರು ಪಡಿತರಕ್ಕಾಗಿ ಬಂದಿದ್ದು; ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿದ್ದ ದೃಶ್ಯ ಕಂಡು ಬಂದಿತು. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಫಲಾನುಭವಿಗಳು 2 ತಿಂಗಳ ಪಡಿತರಕ್ಕಾಗಿ ಬಂದಿದ್ದರೂ; ಉರಿ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಲಾಗದೇ ತಮ್ಮ ಚೀಲಗಳನ್ನಿಟ್ಟು ಮರದ ನೆರಳನ್ನು ಅರಸಿ ಗುಂಪಾಗಿ ನಿಲುತ್ತಿದ್ದ ಕಾರಣ ಪೊಲೀಸರು ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರೂ ಪ್ರಯೋಜನವಾಗಲಿಲ್ಲ. ಟೋಕನ್ ವ್ಯವಸ್ಥೆಯಾದ ಕಾರಣ ಸಂಜೆಯವರೆಗೂ ಪಡಿತರ ವಿತರಣೆ ನಡೆದಿತ್ತು. ಸಾಮಾನ್ಯವಾಗಿ ಹಿಂದೆ ಸರಕಾರ ಬಿಪಿಎಲ್ ಕಾರ್ಡ್ ಕುಟುಂಬದ ಓರ್ವ ಸದಸ್ಯರಿಗೆ 7 ಕೆ.ಜಿ. ಅಕ್ಕಿ ಕೊಡುತ್ತಿತ್ತು. ಇದೀಗ 2 ಕೆ.ಜಿ. ಕಡಿತಗೊಳಿಸಿ 5 ಕೆ.ಜಿ. ಅಕ್ಕಿಯನ್ನು ಮಾತ್ರ ಕೊಡುತ್ತಿದೆ.