ಮಡಿಕೇರಿ, ಏ. 7: ಕೊಡಗು ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಸೇವೆ/ಸಾಮಗ್ರಿಗಳ ಸಾಗಾಟವನ್ನು ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕೆ ಪಾಸ್‍ಗಳನ್ನು ವಿತರಿಸುತ್ತಿಲ್ಲ. ಆದಾಗ್ಯೂ ಈ ಪಾಸ್‍ಗಳನ್ನು ಜಿಲ್ಲೆಯೊಳಗೆ ಮತ್ತು ರಾಜ್ಯದ ಅಂತರ ಜಿಲ್ಲೆಗಳ ಸಂಚಾರಕ್ಕೆ ಮಾತ್ರ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಂತರರಾಜ್ಯ ಸಂಚಾರಕ್ಕೆ ಪಾಸ್‍ಗಳನ್ನು ನೀಡಲಾಗುವುದಿಲ್ಲ.

ಪ್ರಸ್ತುತ ಜಿಲ್ಲೆಯಲ್ಲಿ ಪಾಸ್ ವಿತರಣೆಯಲ್ಲಿ ಗೊಂದಲವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಈ ಪಾಸ್‍ಗಳನ್ನು ಸಂಬಂಧಪಟ್ಟ ಮಡಿಕೇರಿ, ವೀರಾಜಪೇಟೆ ಮತ್ತು ಕುಶಾಲನಗರ ಆರಕ್ಷಕ ಉಪ ಅಧೀಕ್ಷಕರು ಮಾತ್ರ ವಿತರಿಸುವರು.

ತುರ್ತು ವೈದ್ಯಕೀಯ ಸೇವೆ/ಸಾಮಗ್ರಿಗಳ ಸಾಗಾಟಕ್ಕೆ ಮಾತ್ರ ಪಾಸ್ ಅವಶ್ಯವಿರುವವರು ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಮಡಿಕೇರಿ, ವೀರಾಜಪೇಟೆ, ಕುಶಾಲನಗರ ಆರಕ್ಷಕ ಉಪ ಅಧೀಕ್ಷಕರನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.