ಮಡಿಕೇರಿ, ಏ. 7: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾ. 3 ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಮಿತಿ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಗಳಿಗೆ ವಿದೇಶದಿಂದ ಬರುವವರು, ಹೊರ ಜಿಲ್ಲೆಗಳಿಂದ ಹೊರ ರಾಜ್ಯಗಳಿಂದ ಬರುವವರ ಬಗ್ಗೆ ಗಮನ ಹರಿಸಿ ಮಾಹಿತಿಯನ್ನು ಕಲೆಹಾಕುವುದು. ಅಂತಹ ವ್ಯಕ್ತಿಗಳಿಗೆ ಕ್ವಾರಂಟೈನ್ ಸೀಲ್ ಹಾಕುವುದು, 14 ದಿನಗಳವರೆಗೆ ನಿಗಾವಹಿಸುವುದು ಹಾಗೂ ಇನ್ನಿತರ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವಂತೆ ಅಧ್ಯಕ್ಷರು ಸಲಹೆ ನೀಡಿದರು. ಸರಕಾರದಿಂದ ಬರುವಂತಹ ಆದೇಶವನ್ನು ಚಾಚುತಪ್ಪದೇ ಪಾಲಿಸಿಕೊಂಡು ಬರಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರ ಮನವೊಲಿಸಿ ಮನೆಯಲ್ಲಿಯೇ ಇರುವಂತೆ ತಿಳಿಸಬೇಕು. ಕೊರೊನಾ ಮಹಾಮಾರಿಯನ್ನು ಗೆಲ್ಲಬೇಕಾದರೆ ಜನ ಸಂಪರ್ಕ ಕಡಿಮೆ ಮಾಡುವಂತೆ, ಅಂತರ ಕಾಯ್ದು ಕೊಳ್ಳುವಂತೆ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ವೀಡಿಯೋ ಮೂಲಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ. ಗಿರೀಶ್, ಕಾರ್ಯದರ್ಶಿ ಸುಕುಮಾರ, ಪಂಚಾಯಿತಿ ಸಿಬ್ಬಂದಿ ಧನಂಜಯ್, ಧನ್ಯಾ, ಅಣ್ಣಪ್ಪ, ಶುೃತಿ ಮತ್ತು ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಹಾಜರಿದ್ದರು.