ಗೋಣಿಕೊಪ್ಪ ವರದಿ, ಏ. 7: ಪುತ್ತರಿ ರೈತ ಉತ್ಪಾದಕರ ಕಂಪೆನಿ ವತಿಯಿಂದ ಜನರಿಗೆ ಕಡಿಮೆ ದರದಲ್ಲಿ ತರಕಾರಿ ನೀಡಲು ಮುಂದಾಗಿದ್ದು, ಗ್ರಾಹಕರಿಗೆ ಸೊಪ್ಪು ಹಸ್ತಾಂತರ ಮಾಡುವ ಮೂಲಕ ಪುತ್ತರಿ ಎಫ್‍ಪಿಸಿಎಲ್ ಸಿಇಒ ಹೊಟ್ಟೇಂಗಡ ರಾಣಾ ಪೊನ್ನಣ್ಣ ಚಾಲನೆ ನೀಡಿದರು.

ಒಂದಷ್ಟು ವಸ್ತುಗಳು ಜಿಲ್ಲಾಡಳಿತ ನೀಡಿರುವ ದರಕ್ಕಿಂತ ಗರಿಷ್ಠ ಶೇ. 50 ಕ್ಕೂ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೋಣಿಕೊಪ್ಪ ಬೈಪಾಸ್ ರಸ್ತೆ ಬದಿಯಲ್ಲಿ ಜಿಲ್ಲಾಡಳಿತ ನೀಡಿರುವ ಸಮಯದಲ್ಲಿ ಮಾರಾಟ ಆರಂಭಿಸಿದೆ. ರೈತ ಬೆಳೆದ ತರಕಾರಿಯನ್ನು ನೇರವಾಗಿ ಖರೀದಿಸಿ, ಕೇವಲ ಶೇ. 3 ರಷ್ಟು ಲಾಭ ಇಟ್ಟುಕೊಂಡು ಗ್ರಾಹಕರಿಗೆ ನೀಡುತ್ತಿದೆ. ನೆರೆಯ ಜಿಲ್ಲೆಗಳಿಂದ ನೇರವಾಗಿ ಖರೀದಿ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಶೇ. 20 ರಷ್ಟು ಹೆಚ್ಚುವರಿಯಾಗಿ ನೀಡಿ ರೈತನಿಗೆ ನೇರವಾಗಿ ಖರೀದಿ ಮಾಡಿ, ನಂತರ ಕೊಡಗು ಜಿಲ್ಲೆಯಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೆಳೆಗೆ ಮಾರುಕಟ್ಟೆ ಇಲ್ಲ ಎಂದು ಕೊರಗುವ ರೈತನ ಕೈಹಿಡಿದಂತಾಗಿದೆ. ಜಿಲ್ಲಾಡಳಿತ ನೀಡಿದ್ದ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೀನ್ಸ್ ಜಿಲ್ಲಾಡಳಿತದ ದರ 60, ಪುತ್ತರಿ ಅವರ ದರ 45, ಕ್ಯಾರೆಟ್ ಜಿಲ್ಲಾಡಳಿತ ದರ 45, ಪುತ್ತರಿ 35, ಟೊಮೆಟೋ 20, ಪುತ್ತರಿ 10, ನುಗ್ಗೆಕಾಯಿ 45, ಪುತ್ತರಿ 35 ಮಾರಾಟ ಮಾಡಲಾಗುತ್ತಿದೆ. ಸುಮಾರು 1 ಟನ್ ತರಕಾರಿ ಮಾರಾಟ ಮಾಡಲಾಗಿದೆ. ಒಂದೇ ದಿನ 25 ಸಾವಿರ ವ್ಯವಹಾರ ನಡೆಸಿದೆ. ಇದನ್ನು ಮುಂದುವರಿಸಲಾಗುತ್ತಿದೆ.