ಕುಶಾಲನಗರ, ಏ. 5: ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಸ್ತುಗಳ ವಿತರಣೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಗ್ರಾಹಕರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಭಾನುವಾರ ಕೂಡಿಗೆಯಲ್ಲಿ ನಡೆದಿದೆ. ಕೊರೊನಾ ಹಿನ್ನಲೆ ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದಿಂದ ಎರಡು ತಿಂಗಳ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವ್ಯಾಪ್ತಿಯ ಜನರು ಪಡಿತರ ವಸ್ತಗಳನ್ನು ಪಡೆಯಲು ಬೆಳಿಗ್ಗೆ 6 ಗಂಟೆಯಿಂದಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ಇಂದು ಪಡಿತರ ವಸ್ತು ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಈ ಭಾಗದ ಜನರು ದಿನವಿಡೀ ಕಾದು ನಿರಾಸೆಯಿಂದ ಮನೆಗೆ ಹಿಂದಿರುಗಿದರಲ್ಲದೆ; ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು ಸಾರ್ವಜನಿಕರಿಗೆ ಪಡಿತರ ವಸ್ತುಗಳನ್ನು ನೀಡಲು ಮುಂದಾಗಬೇಕು ಎಂದು ಸ್ಥಳೀಯರು ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.